ಬ್ರೆಝಿಲ್ ಭರ್ಜರಿ ಕಂಬ್ಯಾಕ್ – ಜಪಾನ್ ವಿರುದ್ಧ ಕೊನೇ ಕ್ಷಣದಲ್ಲಿ ರೋಚಕ ಜಯ
ಪ್ರಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಬ್ರೆಝಿಲ್

ಬ್ರೆಝಿಲ್ ಭರ್ಜರಿ ಕಂಬ್ಯಾಕ್ – ಜಪಾನ್ ವಿರುದ್ಧ ಕೊನೇ ಕ್ಷಣದಲ್ಲಿ ರೋಚಕ ಜಯಪ್ರಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಬ್ರೆಝಿಲ್

ಫಿಫಾ ವಿಶ್ವಕಪ್​ ಫೀವರ್ ಜೋರಾಗಿದೆ. ಅದರಲ್ಲೂ ಬ್ರೆಝಿಲ್ ಪವರ್ ನೋಡಿ ಜಪಾನ್ ತಂಡ ದಂಗಾಗಿದೆ. ಇನ್ನೇನು ಬ್ರೆಝಿಲ್ ತಂಡ ಸೋಲುತ್ತೆ ಅಂತಾ ಅಂದುಕೊಳ್ಳುವಾಗಲೇ, ಅದು ಕೂಡಾ ಕೊನೇ ಕ್ಷಣದಲ್ಲಿ ಬ್ರೆಝಿಲ್ ಗೆದ್ದು ಬೀಗಿದೆ.

ಇದನ್ನೂ ಓದಿ:ಫಿಫಾ ವಿಶ್ವಕಪ್‍ನಲ್ಲಿ ಮೆಸ್ಸಿ ಹವಾ – 6 ಗೋಲು ಭಾರಿಸಿ ರೆಕಾರ್ಡ್ ಬ್ರೇಕ್

ಫಿಫಾ ವಿಶ್ವಕಪ್ 2026ರ ರೌಂಡ್ ಆಫ್-32 ಸುತ್ತಿನ 2ನೇ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಜಪಾನ್ ನಡುವಿನ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಈ ನಾಕೌಟ್ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಜಪಾನ್ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದವು. ಈ ಮ್ಯಾಚ್​ನಲ್ಲಿ ಮೊದಲ ಗೋಲು ಬಾರಿಸಿದ್ದು ಜಪಾನ್. ಆದರೆ ಕೊನೇ ಕ್ಷಣದಲ್ಲಿ ಪಂದ್ಯ ಗೆದ್ದಿದ್ದು ಬ್ರೆಝಿಲ್.

ಈ ಪಂದ್ಯದ ಆರಂಭದಿಂದಲೂ ಜಪಾನ್ ಆಟಗಾರರು ಬ್ರೆಝಿಲ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಪಂದ್ಯದ 29ನೇ ನಿಮಿಷದಲ್ಲಿ ಬ್ರೆಝಿಲ್‌ನ ಡ್ಯಾನಿಲೋ ಮಾಡಿದ ಸಣ್ಣ ತಪ್ಪನ್ನು ಬಳಸಿಕೊಂಡ ಜಪಾನ್‌ನ ಕೈಶು ಸಾನೊ, ಮೊದಲ ಗೋಲ್ ಬಾರಿಸಿದರು. ಈ ಮೂಲಕ ಜಪಾನ್ ತಂಡವು ಮೊದಲಾರ್ಧದಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಪಂದ್ಯದ ಗತಿಯನ್ನು ಬದಲಿಸಲು ಬ್ರೆಝಿಲ್ ಕೋಚ್ ಕಾರ್ಲೋ ಅನ್ಸೆಲೊಟ್ಟಿ ಹೊಸ ತಂತ್ರ ರೂಪಿಸಿದರು. ಪಂದ್ಯದ 56ನೇ ನಿಮಿಷದಲ್ಲಿ ಕಾರ್ನರ್ ಕಿಕ್ ಮೂಲಕ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅನುಭವಿ ಆಟಗಾರ ಕ್ಯಾಸೆಮಿರೊ, ತಲೆಯಿಂದ ಚೆಂಡನ್ನು ಜಪಾನ್ ನೆಟ್‌ಗೆ ತಳ್ಳುವ ಮೂಲಕ 1-1 ಗೋಲುಗಳ ಸಮಬಲ ತಂದರು. ಉಭಯ ತಂಡಗಳ ಗೋಲು 1-1 ಅಂತರದಿಂದ ಸಮಗೊಳ್ಳುತ್ತಿದ್ದಂತೆ ಪೈಪೋಟಿ ತೀವ್ರಗೊಂಡಿತು. ಇದಾಗ್ಯೂ ಎರಡೂ ತಂಡಳಿಗೆ ಎರಡನೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯ ಮುಕ್ತಾಯದ ಹಂತಕ್ಕೆ ಬಂದಾಗಲೂ ಉಭಯ ತಂಡಗಳು 1-1 ಸಮಬಲದಲ್ಲಿದ್ದವು. ಆದರೆ, ಇಂಜುರಿ ಟೈಮ್‌ನ 95ನೇ ನಿಮಿಷದಲ್ಲಿ ಬ್ರೂನೋ ಗಿಮರೈಸ್ ನೀಡಿದ ಅದ್ಭುತ ಪಾಸ್ ಅನ್ನು ರಿಸೀವ್ ಮಾಡಿದ ಗೇಬ್ರಿಯಲ್ ಮಾರ್ಟಿನೆಲ್ಲಿ, ಗೋಲ್ ಬಾರಿಸಿದರು. ಈ ಕೊನೆಯ ಕ್ಷಣದ ಗೋಲ್ ಇಡೀ ಕ್ರೀಡಾಂಗಣದಲ್ಲಿದ್ದ ಬ್ರೆಝಿಲ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಪಂದ್ಯ ಕೊನೆಗೊಳ್ಳಲು ನಿಮಿಷಗಳು ಮಾತ್ರ ಬಾಕಿ ಇರುವಾಗ ಮೂಡಿಬಂದ ಈ ಗೋಲಿನೊಂದಿಗೆ ಬ್ರೆಝಿಲ್ ತಂಡವು 2-1 ಅಂತರದಿಂದ ಗೆದ್ದು ಪ್ರಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.

Sulekha