ಅಧರ್ಮ ಅಳಿಸೋ ಜ್ವಾಲೆ ಈ ಜಗದ್ಧಾತ್ರಿ.. ಮೋಕ್ಷಿತಾ ಪೈ-ವಿಜಯ್ ಸೂರ್ಯ ಮಾಸ್ ಎಂಟ್ರಿಗೆ ಫ್ಯಾನ್ಸ್ ಫಿದಾ!

ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಆರಂಭವಾಗುತ್ತಿದೆ. ಜಗದ್ಧಾತ್ರಿ ಸೀರಿಯಲ್ ಈಗ ಆರಂಭವಾಗಲಿದೆ. ಈ ಹೊಸ ಸೀರಿಯಲ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಹಾಗೂ ವಿಜಯ್ ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಇದೀಗ ಈ ಸೀರಿಯಲ್‌ನ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡ್ತಿದೆ.
ಇದನ್ನೂ ಓದಿ : ತೂಕ ಇಳಿಕೆಗೆ ಈ ಹಣ್ಣು ಬೆಸ್ಟ್! – ಯಾವಾಗ ಈ ಹಣ್ಣು ಸೇವಿಸಬೇಕು?
ಜಗದ್ಧಾತ್ರಿ ಸೀರಿಯಲ್‌ನ ಪ್ರೋಮೋ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಆದ್ರೆ ಸೀರಿಯಲ್ ನಾಯಕ, ನಾಯಕಿ ಯಾರು ಅನ್ನೋ ಗುಟ್ಟು ಬಿಟ್ಟುಕೊಟ್ಟಿರ್ಲಿಲ್ಲ. ಇದೀಗ ಈ ಧಾರಾವಾಹಿಯ ಮತ್ತೊಂದು ಪ್ರೋಮೋ ರಿಲೀಸ್ ಆಗಿದ್ದು, ಸಖತ್ ಇಂಟರೆಸ್ಟಿಂಗ್ ಆಗಿದೆ. ಪ್ರೋಮೋದ ಆರಂಭದಲ್ಲಿ ನಾಯಕಿ ಜಗದ್ಧಾತ್ರಿ ಮನೆಯಲ್ಲಿ ಎಲ್ಲರ ಮಾತು ಕೇಳಿಕೊಂಡು, ದೇವರಿಗೆ ಪೂಜೆ ಮಾಡುತ್ತಾ, ಅತ್ಯಂತ ಸಾತ್ವಿಕವಾಗಿ ಕಾಣಿಸಿಕೊಳ್ಳುತ್ತಾಳೆ. ಮನೆಯವರು ಆಕೆಯನ್ನು ದರಿದ್ರ ಎಂದು ಬೈದರೂ ಸುಮ್ಮನಿರುತ್ತಾಳೆ. ಆದರೆ, ಹೊರಗಿನ ಪ್ರಪಂಚದಲ್ಲಿ ಅಧರ್ಮ, ಅನ್ಯಾಯ ನಡೆದಾಗ ಅದೇ ಜಗದ್ಧಾತ್ರಿ ಮಹಾಕಾಳಿಯಂತೆ ರೌಡಿಗಳ ಹೆಡೆಮುರಿ ಕಟ್ಟಲು ಜ್ವಾಲೆಯಾಗಿ ಧುಮುಕುತ್ತಾಳೆ.
ನಾಯಕಿ ಕಿವಿಗೆ ಹಿಯರಿಂಗ್ ಡಿವೈಸ್ ಹಾಕಿಕೊಂಡು, ರೌಡಿಗಳ ಕೈಯಿಂದ ಮಗುವನ್ನು ರಕ್ಷಿಸುವ ಸೀನ್ ಹೈಲೈಟ್ ಆಗಿದೆ. ಬೈಕ್ ಚೇಸಿಂಗ್, ಫೈಟಿಂಗ್ ಹಾಗೂ ಸ್ಕೈ-ಡೈವಿಂಗ್ ರೇಂಜ್‌ನ ಸಾಹಸಗಳು ಪ್ರೋಮೋದಲ್ಲಿವೆ. ನಾಯಕ ಮತ್ತು ನಾಯಕಿ ಇಬ್ಬರೂ ಯಾವುದೋ ಸೀಕ್ರೆಟ್ ಮಿಷನ್‌ನಲ್ಲಿ ಇರುವ ತನಿಖಾಧಿಕಾರಿಗಳಂತೆ ಕಾಣುತ್ತಿದ್ದಾರೆ.
ಒಟ್ಟಿನಲ್ಲಿ, ಕೌಟುಂಬಿಕ ಡ್ರಾಮಾ ಜೊತೆಗೆ ಹೈ-ವೋಲ್ಟೇಜ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಜಗದ್ಧಾತ್ರಿ ಸದ್ಯದಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸ್ಯಾಂಡಲ್‌ವುಡ್ ಸಿನಿಮಾ ರೇಂಜ್‌ಗೆ ಹೈಪ್ ಕ್ರಿಯೇಟ್ ಮಾಡಿದೆ.
ಇನ್ನು ಪಾರು ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ಮೋಕ್ಷಿತಾ ಪೈ ಈ ಸೀರಿಯಲ್‌ನಲ್ಲಿ ಜಗದ್ಧಾತ್ರಿ ಆಗಿ ಕಥಾನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೋ, ಅಷ್ಟೇ ಭೀಕರವಾಗಿ ಬೈಕ್ ಸ್ಟಂಟ್ ಹಾಗೂ ಆ್ಯಕ್ಷನ್ ಸೀನ್‌ಗಳಲ್ಲಿ ಅಬ್ಬರಿಸಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಕಿರುತೆರೆಯ ಡಿಂಪಲ್ ಕಿಂಗ್ ವಿಜಯ್ ಸೂರ್ಯ ಹೀರೊ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ವಿಜಯ್ ಸೂರ್ಯ ಕೂಡ ಸಖತ್ ಮಾಸ್ ಆಗಿ ಗನ್ ಹಿಡಿದು ಫೈಟ್ ಮಾಡುತ್ತಾ ಎಂಟ್ರಿ ನೀಡಿದ್ದು, ಇವರಿಬ್ಬರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಜಗದ್ಧಾತ್ರಿ ಸೀರಿಯಲ್ ಪ್ರೋಮೋಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಮೋಕ್ಷಿತಾ ಪೈ ಅವರು ಜಗದ್ಧಾತ್ರಿಯಾಗಿ ಚಂದವಾಗಿ ಕಾಣಿಸಿಕೊಂಡಿದ್ದಾರೆ ಎಂದು ವೀಕ್ಷಕರು ಹೇಳಿದ್ದಾರೆ. ಇನ್ನೂ ಕೆಲವರು ತುಂಬಾ ವಿಜೃಂಭಣೆಯಾಗಿದೆ ಎಂದರೆ ಇನ್ನೂ ಕೆಲವರು, ಮನೆಯಲ್ಲಿ ಯಾರಿಗೂ ಗೊತ್ತಾಗದಂಗೆ ಟ್ರೇನಿಂಗ್ ಪಡೆದು ಪೋಲಿಸ್ ಡಿಪಾರ್ಟ್ಮೆಂಟ್ ಸೇರಿ ಕೆಲಸ ಮಾಡುವುದು, ಮನೆಯಲ್ಲಿ ಕೆಲಸ ಮಾಡುವುದು ಹೇಗೆ ಸಾಧ್ಯ? ಇದಕ್ಕೆ ಸರ್ಕಾರದ ಅನುಮತಿ ಬೇಡವೇ? ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಯಾವಾಗ ಬೇಕಾದರೂ ತಮಗೆ ತಿಳಿದಂತೆ ಡ್ಯೂಟಿ ಮಾಡಲು ಬರುವುದೇ ಎಂದು ಲಾಜಿಕ್ ಪ್ರಶ್ನೆ ಮಾಡಿದ್ದಾರೆ. ಇನ್ನೂ ಹಲವು ವೀಕ್ಷಕರು ಈ ಸೀರಿಯಲ್ ಈಗಾಗಲೇ ಹಿಂದಿಯಲ್ಲಿ ಪ್ರಸಾರವಾಗುತ್ತಿದೆ. ಕನ್ನಡಕ್ಕೆ ತಕ್ಕಂತೆ ಸ್ವಲ್ಪ ಬದಲಾಯಿಸಿಕೊಂಡರೆ ಚೆನ್ನಾಗಿ ಇರುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೋಡಿರಿ

