ಮೊದಲ ಪಟ್ಟಿಯಲ್ಲಿ 130 ಜನ್ರಿಗೆ ‘ಕೈ’ ಟಿಕೆಟ್ – ಸಿದ್ದು, ಡಿಕೆಶಿ, ಸುರ್ಜೇವಾಲಾ ಮೀಟಿಂಗ್.. ಯಾರಿಗೆ ಲಕ್?
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಆದ್ರೆ ಮೂರೂ ಪಕ್ಷಗಳಿಗೆ ಟಿಕೆಟ್ ಹಂಚಿಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಾಗ್ಲೇ ಜೆಡಿಎಸ್ಯಲ್ಲಿ ಟಿಕೆಟ್ ವಿಚಾರಕ್ಕೆ ದೊಡ್ಡಗೌಡ್ರ ಮನೆಯಲ್ಲೇ ಭಾರೀ ಹೈಡ್ರಾಮಾ ನಡೀತಿದೆ. ಹೀಗಾಗಿ ಭಿನ್ನಮತ ಶಮನಗೊಳಿಸಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಕಾಂಗ್ರೆಸ್ ನಾನಾ ಕಸರತ್ತು ನಡೆಸ್ತಿದೆ.
ಇದನ್ನೂ ಓದಿ : ಫ್ಲೈಟ್ ನಲ್ಲಿ ಮಕ್ಕಳಿಗೂ ಟಿಕೆಟ್ ಇದೆ ಎಂದಿದ್ದಕ್ಕೆ ಮಗುವನ್ನೇ ಬಿಟ್ಟು ಹೋದ ದಂಪತಿ!
ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಮೊದಲ ಹಂತದ ಪಟ್ಟಿ ರಿಲೀಸ್ ಮಾಡಲು ಕಾಂಗ್ರೆಸ್ ತೆರೆಮರೆ ತಂತ್ರ ನಡೆಸುತ್ತಿದೆ. ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಮುನ್ನಾ ದಿನವೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.
ಪಕ್ಷದ ನಿಷ್ಠಾವಂತರ ಹಿತಾಸಕ್ತಿ ಕಾಪಾಡುವಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಇಬ್ಬರೂ ವಿಫಲರಾಗಿದ್ದಾರೆ. ಹೀಗಾಗಿ ಭಿನ್ನಾಭಿಪ್ರಾಯಗಳನ್ನ ಇತ್ಯರ್ಥಗೊಳಿಸಲು ಇಬ್ಬರೊಂದಿಗೆ ಸಭೆ ನಡೆಸುವಂತೆ ಸುರ್ಜೇವಾಲಾ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಜೊತೆಗೆ ಸುರ್ಜೇವಾಲಾ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಖಾಸಗಿ ಹೋಟೆಲ್ನಲ್ಲಿ ನಡೆದ ಮೀಟಿಂಗ್ನಲ್ಲಿ ಭಿನ್ನಾಭಿಪ್ರಾಯ ಬಿಟ್ಟು ಗೆಲ್ಲುವ ಅಭ್ಯರ್ಥಿಯನ್ನ ಆಯ್ಕೆ ಮಾಡುವಂತೆ ಸುರ್ಜೇವಾಲಾ ಸಲಹೆ ನೀಡಿದ್ದಾರೆ. ಇದೇ ವೇಳೆ ಮೊದಲ ಹಂತದಲ್ಲಿ ಕಾಂಗ್ರೆಸ್ನಿಂದ 130 ಅಭ್ಯರ್ಥಿಗಳ ಘೋಷಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಮಾತನಾಡಿರುವ ಡಿಕೆಶಿ, ಅರ್ಜಿ ಹಾಕಿದವ್ರಿಗೆಲ್ಲಾ ಟಿಕೆಟ್ ಕೊಡೋಕೆ ಆಗಲ್ಲ. ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಇಲ್ಲ ಎಂದಿದ್ದಾರೆ.
ಸಭೆಯಲ್ಲಿ ವಿವಿಧ ಸಂಸ್ಥೆಗಳು ಚುನಾವಣೆ ಕುರಿತು ನಡೆಸಿದ ವಿವಿಧ ಸಮೀಕ್ಷೆಗಳ ಕುರಿತೂ ನಾಯಕರು ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಸುರ್ಜೇವಾಲಾ ಅವರು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದರು.