DSP ಹುದ್ದೆಗೇರಿದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ – ಬಿಹಾರ ಸರ್ಕಾರದಿಂದ ಗೌರವಾನ್ವಿತ ಹುದ್ದೆ

DSP ಹುದ್ದೆಗೇರಿದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ – ಬಿಹಾರ ಸರ್ಕಾರದಿಂದ ಗೌರವಾನ್ವಿತ ಹುದ್ದೆ

ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ DSP ಹುದ್ದೆ ಒಲಿದು ಬಂದಿದೆ. ಬಿಹಾರ ಸರ್ಕಾರ ಟೀಂ ಇಂಡಿಯಾದ ವೇಗಿಗಳಾದ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರನ್ನು ಡಿಎಸ್‌ಪಿ ಹುದ್ದೆಗೆ ನೇಮಿಸಿದೆ. ಕ್ರೀಡಾ ಕೋಟಾದ ಅಡಿಯಲ್ಲಿ ಈ ನೇಮಕಾತಿ ನಡೆದಿದೆ.

ಇದನ್ನೂ ಓದಿ:ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ ನಲ್ಲಿ ಮಾನವ್ ಅಬ್ಬರ – 5 ವಿಕೆಟ್ ಗೊಂಚಲು ಪಡೆದ ಸುತಾರ್

ಮೊಹಮ್ಮದ್ ಸಿರಾಜ್, ಹರ್ಭಜನ್ ಸಿಂಗ್, ರಿಚಾ ಘೋಷ್, ಹರ್ಮನ್ ಪ್ರೀತ್ ಕೌರ್ ಸೇರಿದಂತೆ 8 ಕ್ರಿಕಿಟಿಗರ ಜೊತೆ ಈಗ ಮತ್ತಿಬ್ಬರು ಟೀಮ್ ಇಂಡಿಯಾ ಆಟಗಾರರು DSP ಹುದ್ದೆಗೇರಿದ್ದಾರೆ. ಟೀಂ ಇಂಡಿಯಾದಲ್ಲಿ ಆಡಿದ ಇಬ್ಬರು ಯುವ ವೇಗಿಗಳಾದ ಆಕಾಶ್ ದೀಪ್ ಹಾಗೂ ಮುಖೇಶ್ ಕುಮಾರ್​ ಅವರನ್ನು ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ವರಿಷ್ಠಾಧಿಕಾರಿ ಹುದ್ದೆಗೆ ನೇರವಾಗಿ ನೇಮಕ ಮಾಡಲು ಬಿಹಾರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ನಡೆದ ಸಂಪುಟ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಡಿಎಸ್​ಪಿ ಹುದ್ದೆಗೇರಿದ ಟೀಂ ಇಂಡಿಯಾ ಕ್ರಿಕೆಟಿಗರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಈಗಾಗಲೇ ಹರ್ಭಜನ್ ಸಿಂಗ್, ಮೊಹಮ್ಮದ್ ಸಿರಾಜ್, ದೀಪ್ತಿ ಶರ್ಮಾ, ಜೋಗಿಂದರ್ ಶರ್ಮಾ, ರಿಚಾ ಘೋಷ್, ಹರ್ಮನ್​ಪ್ರೀತ್​ ಕೌರ್ ಈ ಹುದ್ದೆಯನ್ನು ಅಲಂಕರಿಸಿದ್ದರು. ಬಿಹಾರ ಸರ್ಕಾರ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರನ್ನು ಕ್ರೀಡಾ ಕೋಟಾದಡಿಯಲ್ಲಿ ಡಿಎಸ್‌ಪಿ ನೇಮಕಾತಿಗಳಿಗೆ ಶಿಫಾರಸು ಮಾಡಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಬಿಹಾರದ ಈ ಇಬ್ಬರು ಆಟಗಾರರನ್ನು ಡಿಎಸ್‌ಪಿಗಳಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಆಡಳಿತ ಇಲಾಖೆಯು ತನ್ನ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಗೃಹ ಇಲಾಖೆಗೆ ಕಳುಹಿಸಿದೆ. ಮುಖೇಶ್ ಕುಮಾರ್ ಭಾರತದ ಪರ ಇದುವರೆಗೆ 27 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇದರಲ್ಲಿ ಅವರು 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 3 ಟೆಸ್ಟ್‌ ಪಂದ್ಯಗಳು, 17 ಟಿ20ಪಂದ್ಯಗಳು ಮತ್ತು 7 ಏಕದಿನ ಪಂದ್ಯಗಳು ಸೇರಿವೆ. ಇತ್ತ ಆಕಾಶ್ ದೀಪ್ ಇದುವರೆಗೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸಿದ್ದು, ಇಲ್ಲಿಯವರೆಗೆ 10 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 99 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಡಿಎಸ್‌ಪಿ ಹುದ್ದೆಯನ್ನು ಬಿಹಾರ ಸರ್ಕಾರದ ಗೆಜೆಟೆಡ್ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ಮೂಲ ವೇತನವು ತಿಂಗಳಿಗೆ ಸುಮಾರು ₹53,100 ರಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಸರ್ಕಾರಿ ವಸತಿ, ವಾಹನ ಸೌಲಭ್ಯ, ಭದ್ರತಾ ಸಿಬ್ಬಂದಿ, ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ಆಡಳಿತಾತ್ಮಕ ಸೌಲಭ್ಯಗಳು ಸೇರಿವೆ. ನೇಮಕಾತಿಯ ನಂತರ, ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಬಿಹಾರ ಪೊಲೀಸ್ ಸೇವೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.

Kishor KV