ಮಸಣವಾದ ಮದುವೆ ಮನೆ – ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮದುವೆ ನಡೆಯಬೇಕಿದ್ದ ಮನೆ ಮಸಣವಾಗಿದೆ. ಡೆತ್ ನೋಟ್ ಬರೆದಿಟ್ಟು ತಾಯಿ, ತಂದೆ ಹಾಗೂ ಮಗಳು ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ. ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನಿಂದ ಯುವತಿಗೆ ಕಿರುಕುಳ ಹಿನ್ನೆಲೆ ವಿಷ ಸೇವಿಸಿ ಮೂವರು ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಮೃತರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ಇದನ್ನೂ ಓದಿ: ಮೃಗಶಿರದಲ್ಲಿ ಮಳೆರಾಯನ ಆರ್ಭಟವಿಲ್ಲ – ಆರಿದ್ರಾ ದೂರ ಮಾಡುತ್ತಾ ದಾರಿದ್ರ್ಯ?
ರಕ್ಷಿತಾಗೆ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈತನಿಗೆ ರಕ್ಷಿತಾ ಕಳುಹಿಸಿದ್ದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಮಾನಸಿಕ ಹಿಂಸೆ ನೀಡಿದ್ದ ಎನ್ನಲಾಗಿದೆ. ರಕ್ಷಿತಾ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನಿಗೂ ಈತ ಫೋಟೋಗಳನ್ನು ಕಳುಹಿಸಿದ್ದ. ಹೀಗಾಗಿ ಮಾನಕ್ಕೆ ಅಂಜಿದ ಕುಟುಂಬಸ್ಥರು ಮನೆಯಲ್ಲೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೂವರ ಸಾವಿಗೂ ಉಲ್ಲಾಸ್ ಗೌಡನೇ ಕಾರಣನೆಂದು ರಕ್ಷಿತಾ ಡೆತ್ನೋಟ್ ಬರೆದಿರೋದು ಕೂಡ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಉಲ್ಲಾಸ್ ಗೌಡ ಬಂಧನಕ್ಕೆ ಗ್ರಾಮಸ್ಥರು ಪಟ್ಟುಹಿಡಿದಿದ್ದು, ಬಂಧನವರೆಗೂ ಮೃತದೇಹಗಳನ್ನು ತೆಗೆದುಕೊಂಡು ಹೋಗದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಂಬಂಧಿಕರು ಹಾಗೂ ಗ್ರಾಮಸ್ಥರ ಮಾತಿನ ಚಕಮಕಿ ಕೂಡ ನಡೆದಿದೆ. ವಿರೋಧದ ನಡುವೆಯೂ ಮೃತದೇಹಗಳು ಆ್ಯಂಬುಲೆನ್ಸ್ಗೆ ಶಿಫ್ಟ್ ಮಾಡಿ ಶವಗಳನ್ನು ಕೊಂಡೊಯ್ಯುತ್ತಿದ್ದ ಕಾರಣ ಆ್ಯಂಬುಲೆನ್ಸ್ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಪ್ರಸಂಗ ಕೂಡ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿ. ಟಿ.ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಮಾತ್ರ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ನೋಡಿರಿ

