ಮೃಗಶಿರದಲ್ಲಿ ಮಳೆರಾಯನ ಆರ್ಭಟವಿಲ್ಲ – ಆರಿದ್ರಾ ದೂರ ಮಾಡುತ್ತಾ ದಾರಿದ್ರ್ಯ?

ಮಳೆಗಾಲ ಆರಂಭವಾದರೂ ಮಳೆರಾಯನ ಅಬ್ಬರವಿಲ್ಲ. ಮೋಡ ಕವಿದ ವಾತಾವರಣವಿದ್ದರೂ ವರುಣನ ಸುಳಿವಿಲ್ಲ. ನದಿ, ಕೆರೆ ಕಟ್ಟೆಗಳನ್ನು ತುಂಬಿಸುವ ಮೃಗಶಿರ ಮಳೆ ಈ ಬಾರಿ ಮೌನವಾಗಿದೆ. ಮಂಗಳವಾರದಿಂದ (ಜೂನ್, 23) ಶುರುವಾಗುವ ಆರಿದ್ರಾ ಮಳೆಯಾದರೂ ದಾರಿದ್ರ್ಯ ದೂರ ಮಾಡುತ್ತಾ ಅಂತಾ ರೈತರು ಕಾಯುತ್ತಿದ್ದಾರೆ.
ಇದನ್ನೂ ಓದಿ:ಫ್ರೀ ಬಸ್ ಪ್ರಯಾಣಕ್ಕೆ ಹೊಸ ರೂಲ್ಸ್ – ವೋಟರ್ ಐಡಿ ಇದ್ರೆ ಮಾತ್ರ ಸ್ಮಾರ್ಟ್ ಕಾರ್ಡ್
ಸೋಮವಾರದಂದು ಮೃಗಶಿರ ಮಳೆಯ ಕೊನೇ ದಿನ. ಮೃಗಶಿರಾ ಮಳೆ ನಕ್ಷತ್ರ ಯಾಕೋ ಮೌನವಾಗಿದೆ. ಮಳೆರಾಯನ ಆರ್ಭಟವೇ ಇರಲಿಲ್ಲ. ಇಲ್ಲದಿದ್ದರೆ ಇಷ್ಟು ಹೊತ್ತಿಗೆಲ್ಲಾ ಕೆರೆ ಕಟ್ಟೆಗಳು ತುಂಬಬೇಕಿತ್ತು. ನದಿ, ಹಳ್ಳ ಕೊಳ್ಳಗಳಲ್ಲಿ ನೀರು ಹರಿಯಬೇಕಿತ್ತು. ಜೀವಜಲಗಳು ನಳನಳಿಸಬೇಕಿತ್ತು. ಆದರೆ, ಜೂನ್ 22 ಕಳೆದರೂ ಮಳೆ ಬಂದಿದೆ ಅನ್ನೋದು ಬಿಟ್ಟರೆ ಅಬ್ಬರವಿಲ್ಲ. ಇನ್ನು ಮಂಗಳವಾರದಿಂದ ಆರ್ದ್ರಾ ಮಳೆ ನಕ್ಷತ್ರ ಆರಂಭವಾಗುತ್ತದೆ. ಆರಿದ್ರಾ ಮಳೆ ಹುಯ್ಯದಿದ್ದರೆ ದಾರಿದ್ರ್ಯಾ ಖಚಿತ ಎಂಬ ಗಾದೆ ಮಾತಿದೆ. ಈ ಮಾತು ಮಳೆಯ ಮಹತ್ವವನ್ನು ತಿಳಿಸುತ್ತದೆ. ಅಂದರೆ ಆರಿದ್ರಾ ಮಳೆ ಕೃಷಿ ಚಟುವಟಿಕೆಗೆ ಅಷ್ಟು ಮುಖ್ಯ. ಅದೇ ಕಾರಣಕ್ಕೆ ರೈತರು ಆರಿದ್ರಾ ಮಳೆಗಾಗಿ ಕಾಯುತ್ತಾರೆ. ಮೃಗಶಿರಾ ಹಾಗೂ ಆರಿದ್ರಾ ಮಳೆಗಳ ವೇಳೆಯಲ್ಲಿ ಕೆರೆಕಟ್ಟೆಗಳು ತುಂಬುವುದು ಪ್ರತೀತಿ.
ಆರಿದ್ರಾ ಮಳೆಯು ಹಿಂದೂ ಜ್ಯೋತಿಷ್ಯದ ೨೭ ನಕ್ಷತ್ರಗಳಲ್ಲಿ ಆರಿದ್ರಾ ನಕ್ಷತ್ರಕ್ಕೆ ಸಂಬಂಧಿಸಿದ ಮಳೆಯಾಗಿದೆ. ಮುಂಗಾರು ಮಳೆಯ ಆರಂಭಿಕ ಹಂತಗಳಲ್ಲಿ ಒಂದಾಗಿರುವ ಈ ಮಳೆಯು ಕೃಷಿಗೆ ಅತ್ಯಂತ ಮಹತ್ವದ್ದಾಗಿದೆ. ಸೂರ್ಯನು ಆರಿದ್ರಾ ನಕ್ಷತ್ರವನ್ನು ಪ್ರವೇಶಿಸುವ ಕಾಲಕ್ಕೆ (ಸಾಮಾನ್ಯವಾಗಿ ಜೂನ್ ಅಂತ್ಯ) ಈ ಮಳೆ ಸುರಿಯುತ್ತದೆ. ಆರಿದ್ರಾ ಮಳೆ ಬರುವ ಹೊತ್ತಿಗೆ ರೈತರು ಭೂಮಿಯನ್ನು ಹದಗೊಳಿಸಿ, ಬೀಜ ಬಿತ್ತನೆ ಮಾಡಿರುತ್ತಾರೆ. ಕರಾವಳಿ ಭಾಗಗಳಲ್ಲಿ ಅಂದರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಈ ಸಮಯದಲ್ಲಿಯೇ ನಾಟಿ ಕಾರ್ಯ ನಡೆಯುತ್ತದೆ. ಈ ಮಳೆಯ ಹನಿಗಳು ಬಿದ್ದಾಗ ಭೂಮಿ ತಂಪಾಗುತ್ತದೆ. ಆರಿದ್ರಾ ಮಳೆ ಚೆನ್ನಾಗಿ ಸುರಿದರೆ ಕೃಷಿಕೆಲಸ ಚುರುಕಾಗುತ್ತದೆ. ಜೊತೆಗೆ ಮುಂದಿನ ಎಲ್ಲಾ ಮಳೆಗಳು ಚೆನ್ನಾಗಿಯೇ ಸುರಿಯುತ್ತವೆ. ಆರಿದ್ರಾ ಮಳೆ ಬಾರದಿದ್ದರೆ ದಾರಿದ್ರ್ಯ ಬರುತ್ತದೆ. ಜೊತೆಗೆ ನಾಟಿಕೆಲಸದಲ್ಲಿ ಮಗ್ನರಾಗಿರುವ ರೈತರ ಬದುಕು ಅತಂತ್ರವಾಗುತ್ತದೆ.

ನೋಡಿರಿ

