ಹರಿಣಗಳ ಮುಂದೆ ಮಂಡಿಯೂರಿದ ಭಾರತದ ವನಿತೆಯರು – ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತೆಯರ ತಂಡ ಮೊದಲ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತನ್ನ ಕಳಪೆ ಪ್ರದರ್ಶನದಿಂದಾಗಿ ಸೋಲು ಅನುಭವಿಸಿದೆ.
ಇದನ್ನೂ ಓದಿ:ಲಂಕಾ ದಹನ ಮಾಡಿದ ವೈಭವ್ ಸೂರ್ಯವಂಶಿ- ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ
ಟೀಮ್ ಇಂಡಿಯಾ ವನಿತೆಯರಿಗೆ ಸೌತ್ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ಸೆಮೀಸ್ ಎಂಟ್ರಿ ಸಾಧ್ಯವಾಗುತ್ತಿತ್ತು. ಆದರೆ, ಭಾರತ ತನ್ನದೇ ತಪ್ಪುಗಳಿಂದ ಸೋಲಿನ ಆಘಾತ ಎದುರಿಸಿದೆ. ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಸ್ಮೃತಿ ಹಾಗೂ ಶಫಾಲಿ ಮೊದಲ 3 ಓವರ್ಗಳಲ್ಲಿ 30 ರನ್ ಕಲೆಹಾಕಿದರು. ಆದರೆ 3ನೇ ಓವರ್ನ ಕೊನೆಯ ಎಸೆತದಲ್ಲಿ ಬೇಡದ ಶಾಟ್ ಆಡುವ ಯತ್ನದಲ್ಲಿ ಸ್ಮೃತಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ಯಾಸ್ತಿಕಾ ಭಾಟಿಯಾ ಬೇಗನೆ ಔಟಾದರು. ನಂತರ ಶಫಾಲಿ ಕೂಡ 31 ರನ್ ಬಾರಿಸಿ ಔಟಾದರು. ಆರಂಭಿಕರ ವಿಕೆಟ್ ಪತನದ ನಂತರ ಬ್ಯಾಟಿಂಗ್ ವಿಭಾಗ ಪೆವಿಲಿಯನ್ ಪರೇಡ್ ಶುರು ಮಾಡಿತು. ಈ ಪಂದ್ಯಾವಳಿಯಲ್ಲಿ ಇದುವರೆಗೆ ಲಯಕಂಡುಕೊಳ್ಳದ ಜೆಮಿಮಾ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಐತಿಹಾಸಿಕ 200ನೇ ಟಿ20 ಪಂದ್ಯವನ್ನಾಡಿದ ನಾಯಕಿ ಹರ್ಮನ್‌ಪ್ರೀತ್ ಅವರ ಇನ್ನಿಂಗ್ಸ್ ಕೂಡ 24 ರನ್ಗಳಿಗೆ ಅಂತ್ಯವಾಯಿತು. ಕೊಂಚ ಹೋರಾಟ ತೋರಿದ ದೀಪ್ತ 29 ರನ್ಗಳಿಗೆ ಸುಸ್ತಾದರೆ, ರಿಚಾ ಘೋಷ್ 15 ರನ್ಗಳಿಗೆ ಪೆವಿಲಿಯನ್ ದಾರಿ ಹಿಡಿದರು. ಟೀಂ ಇಂಡಿಯಾ ಕೇವಲ 158 ರನ್ ಕಲೆಹಾಕಿತು.
159 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು ಪವರ್ಪ್ಲೇನಲ್ಲೇ ಟೀಂ ಇಂಡಿಯಾದ ಸ್ಪಿನ್ನರ್ಗಳು ಸಂಪೂರ್ಣವಾಗಿ ಕಟ್ಟಿಹಾಕಿದರು. ತಂಡದ ಮೊದಲೆರಡು ವಿಕೆಟ್ಗಳು ಕೇವಲ 25 ರನ್ಗಳಿಗೆ ಉರುಳಿದವು. ಹೀಗಾಗಿ ಆಫ್ರಿಕಾ ತಂಡ ಮೊದಲ 6 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 26 ರನ್. ಆದರೆ ಅಲ್ಲಿಂದ ಜೊತೆಯಾದ ಕಪ್ ಹಾಗೂ ಬ್ರಿಟ್ಸ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಆ ನಂತರ ಹಳಿ ತಪ್ಪಿತು. ಅದರಲ್ಲೂ ತಂಡದ ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಸರಾಗವಾಗಿ ರನ್ ನೀಡಿದ್ದು, ಆಫ್ರಿಕಾದ ಒತ್ತಡವನ್ನು ಕಡಿಮೆ ಮಾಡಿತು. ಇದೇ ಹಂತದಲ್ಲಿ ರಾಧಾ ಯಾದವ್, ಕಪ್ ನೀಡಿದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಆ ಸಮಯದಲ್ಲಿ ಕಪ್ ಅರ್ಧಶತಕವನ್ನು ಬಾರಿಸಿರಲಿಲ್ಲ. ಆದರೆ ಆ ಜೀವದಾನದ ಲಾಭ ಪಡೆದ ಕಪ್ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ ತಂಡದ ಸೋಲಿನಲ್ಲಿ ನಾಯಕಿ ಹರ್ಮನ್‌ಪ್ರೀತ್ ತೆಗೆದುಕೊಂಡ ನಿರ್ಧಾರಗಳು ಕಾರಣವಾದವು. ಈ ಪಂದ್ಯದಲ್ಲಿ ದೀಪ್ತಿ ದುಬಾರಿಯಾಗಿದ್ದರೂ ಅವರಿಂದ 19ನೇ ಓವರ್ ಬೌಲ್ ಮಾಡಿಸಿದರು. ಈ ಓವರ್ನಲ್ಲಿ 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕಪ್ ತಂಡದ ಗೆಲುವು ಖಚಿತ ಪಡಿಸಿದರು.
ಒಟ್ಟಾರೆ ಹೇಳುವುದಾದರೆ ಇಂಡಿಯಾ ಕ್ಯಾಪ್ಟನ್ ಕೆಲವು ತಪ್ಪು ನಿರ್ಧಾರಗಳು, ಬ್ಯಾಟಿಂಗ್ ವೈಫಲ್ಯ ಮತ್ತು ಫೀಲ್ಡಿಂಗ್, ಬೌಲಿಂಗ್‌ನಲ್ಲೂ ಟೀಮ್ ಇಂಡಿಯಾ ವನಿತೆಯರು ಎಡವಿದರು. ಇದೇ ಸೋಲನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಈಗ ಟೀಮ್ ಮುಂದಿದೆ.

ನೋಡಿರಿ

