ಕುಟುಂಬದ ಜೊತೆ ನೆಲೆಸಿದ್ದಾನೆ ತ್ರಿನೇತ್ರ ಗಣಪ – ರಾಜಸ್ಥಾನದ ಕೋಟೆ ವಿನಾಯಕನ ವಿಶೇಷತೆಯೇನು ಗೊತ್ತಾ?

ಗಣೇಶನಿಗೆ ಮೊದಲು ಪೂಜೆ.. ಹೀಗಾಗಿ ಎಲ್ಲರೂ ಕೂಡ ವಿನಾಯಕನಿಗೆ ಕೈ ಎತ್ತಿ ಮುಗಿಯುತ್ತಾರೆ. ರಾಜಸ್ಥಾನದ ಪುರಾತನ ಹಾಗೂ ಐತಿಹಾಸಿಕ ಕೋಟೆಯೊಂದರಲ್ಲಿ ಗಣೇಶನು ತನ್ನ ಇಡೀ ಕುಟುಂಬದೊಂದಿಗೆ ನೆಲೆಸಿದ್ದಾನೆ. ಅಷ್ಟೇ ಅಲ್ಲದೆ, ಇಲ್ಲಿ ಭಕ್ತರು ಮೂರು ಕಣ್ಣುಗಳನ್ನು ಹೊಂದಿರುವ ವಿನಾಯಕನ ಅತ್ಯಂತ ಅಪರೂಪದ ರೂಪವನ್ನು ಕಣ್ತುಂಬಿಕೊಳ್ಳಬಹುದು. ಈ ಭವ್ಯವಾದ ಧಾರ್ಮಿಕ ಕೇಂದ್ರದ ವಿಶೇಷತೆ ತಿಳಿದುಕೊಳ್ಳೋಣ.
ತ್ರಿನೇತ್ರ ಗಣಪತಿ ದೇವಾಲಯ . ಈ ಅದ್ಭುತ ದೇವಾಲಯವು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಐತಿಹಾಸಿಕವಾಗಿ ಪ್ರಸಿದ್ಧವಾದ ರಣಥಂಬೋರ್ ಕೋಟೆಯ ಆವರಣದಲ್ಲಿದೆ. ಬೆಟ್ಟದ ಮೇಲಿರುವ ಈ ದೇವಸ್ಥಾನವು ದೇಶಾದ್ಯಂತದ ಪ್ರವಾಸಿಗರನ್ನು ಮತ್ತು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಸುತ್ತಲೂ ಹರಡಿರುವ ಪ್ರಕೃತಿ ಸೌಂದರ್ಯ ಮತ್ತು ಕೋಟೆಯ ಗಾಂಭೀರ್ಯದ ನಡುವೆ ನೆಲೆಸಿರುವ ಈ ಗಣಪತಿ ಸನ್ನಿಧಿ, ಆಧ್ಯಾತ್ಮಿಕತೆ ಮತ್ತು ಇತಿಹಾಸದ ಅಪೂರ್ವ ಸಂಗಮವಾಗಿ ಕಂಗೊಳಿಸುತ್ತಿದೆ.
ಈ ದೇವಾಲಯದ ನಿರ್ಮಾಣದ ಹಿಂದೆ 13ನೇ ಶತಮಾನದ ಒಂದು ಕುತೂಹಲಕಾರಿ ಇತಿಹಾಸವಿದೆ. ಆಗ ರಣಥಂಬೋರ್ ಅನ್ನು ಆಳುತ್ತಿದ್ದ ರಾಜ ಹಮೀರ್ ದೇವ್ ಗಣೇಶನ ಪರಮ ಭಕ್ತನಾಗಿದ್ದನು. ಆ ಸಮಯದಲ್ಲಿ ದೆಹಲಿಯ ಸುಲ್ತಾನ ಅಲಾವುದ್ದೀನ್ ಖಿಲ್ಜಿ ಈ ಕೋಟೆಯ ಮೇಲೆ ದಾಳಿ ಮಾಡಿದ್ದರಿಂದ ಸುದೀರ್ಘ ಯುದ್ಧ ನಡೆಯಿತು. ಯುದ್ಧ ಮುಂದುವರೆದಂತೆ ಕೋಟೆಯಲ್ಲಿದ್ದ ಧಾನ್ಯ ಮತ್ತು ಅಗತ್ಯ ಸಾಮಗ್ರಿಗಳ ದಾಸ್ತಾನು ಖಾಲಿಯಾಗತೊಡಗಿತು. ಇದರಿಂದ ಚಿಂತಿತನಾದ ರಾಜನು ಗಣೇಶನಿಗೆ ಶರಣಾಗಿ ಪ್ರಾರ್ಥಿಸಿದಾಗ, ಅರಸನ ಕನಸಿನಲ್ಲಿ ಬಂದ ವಿಘ್ನೇಶ್ವರನು ಚಿಂತಿಸಬೇಡ, ಎಲ್ಲವೂ ಸರಿಯಾಗುತ್ತದೆ ಎಂದು ಅಭಯ ನೀಡಿದನಂತೆ.
ಸ್ಥಳೀಯ ನಂಬಿಕೆಗಳ ಪ್ರಕಾರ, ಮರುದಿನ ಮುಂಜಾನೆ ಕೋಟೆಯ ಗೋಡೆಯ ಮೇಲೆ ಮೂರು ಕಣ್ಣುಗಳಿರುವ ಗಣೇಶನ ಆಕೃತಿ ಪವಾಡ ಸದೃಶವಾಗಿ ಮೂಡಿಬಂದಿತ್ತು. ಅದರ ಬೆನ್ನಲ್ಲೇ ಯುದ್ಧದ ಪರಿಸ್ಥಿತಿಯೂ ಬದಲಾಗಿ ಶತ್ರು ಪಡೆಗಳು ಹಿಮ್ಮೆಟ್ಟಿದವು. ಅಚ್ಚರಿಯೆಂದರೆ ಖಾಲಿಯಾಗುತ್ತಿದ್ದ ಕೋಟೆಯ ಧಾನ್ಯದ ಉಗ್ರಾಣಗಳು ಕೂಡ ಮತ್ತೆ ಭರ್ತಿಯಾಗಿದ್ದವು. ಈ ದೈವಿಕ ಮಹಿಮೆಗೆ ಕೃತಜ್ಞತೆ ಸಲ್ಲಿಸಲು ರಾಜ ಹಮೀರ್ ದೇವ್ ಗಣೇಶನು ಪ್ರತ್ಯಕ್ಷನಾದ ಅದೇ ಜಾಗದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ.
ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪವನ್ನು ನಾವು ಇಲ್ಲಿ ನೋಡಬಹುದು. ಇಲ್ಲಿ ಗಣೇಶನು ಕೇವಲ ತ್ರಿನೇತ್ರಧಾರಿಯಾಗಿ ಮಾತ್ರವಲ್ಲದೆ, ತನ್ನ ಇಡೀ ಕುಟುಂಬದೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಾನೆ. ವಿಘ್ನರಾಜನ ಪಕ್ಕದಲ್ಲೇ ಆತನ ಪತ್ನಿಯರಾದ ಸಿದ್ಧಿ ಮತ್ತು ಬುದ್ಧಿ ದೇವತೆಗಳು ಕುಳಿತಿದ್ದರೆ, ಅವರ ಮುದ್ದಿನ ಪುತ್ರರಾದ ಶುಭ್ ಮತ್ತು ಲಾಭ್ ಕೂಡ ಜೊತೆಯಲ್ಲಿದ್ದಾರೆ. ಇಡೀ ಪರಿವಾರದೊಂದಿಗೆ ನೆಲೆಸಿರುವ ಈ ಗಣಪತಿಯನ್ನು ದರ್ಶನ ಮಾಡುವುದರಿಂದ ಕೌಟುಂಬಿಕ ಸಂತೋಷ, ಸಂಪತ್ತು, ಬುದ್ಧಿಶಕ್ತಿ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ನೋಡಿರಿ

