ಅಯೋಧ್ಯೆ ಸೇರಿದವು ಅಮೂಲ್ಯ ಸಾಲಿಗ್ರಾಮ ಶಿಲೆಗಳು – ರಾಮ ಸೀತೆಯರ ವಿಗ್ರಹ ಕಾರ್ಯ ಶುಭಾರಂಭ
Ayodhya-ram-mandir ಮುಂದಿನ ಮಕರ ಸಂಕ್ರಾಂತಿಯೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಕಾಮಗಾರಿ ಕೂಡಾ ಭರದಿಂದ ಸಾಗುತ್ತಿದೆ. ಇದೀಗ ಶ್ರೀರಾಮ ಮತ್ತು ಸೀತೆಯ ವಿಗ್ರಹ ನಿರ್ಮಾಣಕ್ಕೆ ಸಾಲಿಗ್ರಾಮ ಶಿಲೆಗಳನ್ನು ತರಲಾಗಿದೆ. ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ಗುರುವಾರ ಅಯೋಧ್ಯೆ ತಲುಪಿವೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಬಳಕೆಯಾಗುವ ಸಾಮಗ್ರಿಗಳ ಸಂಗ್ರಹ ಸ್ಥಳವಾದ ರಾಮ್ ಸೇವಕ್ ಪುರಂ ಎಂಬಲ್ಲಿ ಈ ಶಿಲೆಗಳನ್ನು ಇಡಲಾಗಿದೆ.
ಇದನ್ನೂ ಓದಿ: ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯ ಮಾತ್ರ ಸಂಪರ್ಕಿಸಿ – ಮದ್ರಾಸ್ ಹೈಕೋರ್ಟ್!
ಗುರುವಾರ ಬೆಳಗ್ಗೆ 10:30ಕ್ಕೆ ಈ ಪವಿತ್ರ ಶಿಲೆಗಳಿಗೆ ಪೂಜೆ ಮಾಡಲಾಗಿದೆ. ಈಗ ತರಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ನೇಪಾಳದ ಕಾಳಿ ಗಂಡಕಿ ನದಿಯ ಜಲಪಾತವೊಂದರಿಂದ ಆಯ್ದುಕೊಂಡು ಬರಲಾಗಿದೆ. ನೇಪಾಳದಿಂದ ಅಯೋಧ್ಯೆಗೆ (Ayodhya-ram-mandir) ಶೀಲ ಯಾತ್ರೆ ಮೂಲಕ ತರಲಾಗಿರುವ ಸಾಲಿಗ್ರಾಮ ಶಿಲೆಗಳನ್ನು ಮಾರ್ಗಮಧ್ಯೆ ಹಲವು ಸ್ಥಳಗಳಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನಕ್ಕಿಡಲಾಗಿತ್ತು. ಹಲವು ಕಡೆ ಈ ಶಿಲೆಗೆ ಪೂಜೆಗಳು ನಡೆದಿವೆ.
ಈಗ ತಂದಿರುವ ಎರಡು ಕಲ್ಲುಗಳಲ್ಲಿ ಒಂದು ಕಲ್ಲು 26 ಟನ್ ತೂಕ ಹೊಂದಿದರೆ, ಮತ್ತೊಂದು ಕಲ್ಲು 14 ಟನ್ ತೂಗುತ್ತದೆ. ರಾಮನ ಮೂರ್ತಿ 5.5 ಅಡಿ ಇರಲಿದ್ದು, ವಿಗ್ರಹ ಕೆತ್ತನೆ ಕಾರ್ಯವೂ ಗುರುವಾರದಿಂದಲೇ ನಡೆಯಲಿದೆ. ವೈಜ್ಞಾನಿಕವಾಗಿ ಈ ಸಾಲಿಗ್ರಾಮ ಕಲ್ಲುಗಳು ಒಂದು ರೀತಿಯಲ್ಲಿ ಪಳೆಯುಳಿಕೆ ಶಿಲೆಗಳಾಗಿವೆ. ಇದು ನೇಪಾಳದ ಕಾಳಿ ಗಂಡಕಿ ನದಿ ತೀರಗಳಲ್ಲಿ ಮಾತ್ರ ಸಿಗುವ ಅಪರೂಪದ ಶಿಲೆಗಳು. ಇನ್ನು ಈ ಶಿಲೆಗಳ ವಿಶೇಷತೆಯೇನೆಂದರೆ, 6ರಿಂದ 40 ಕೋಟಿ ವರ್ಷದಷ್ಟು ಪುರಾತನವಾದ ಪಳೆಯುಳಿಕೆ ಶಿಲೆಗಳಿವು.
ಉಡುಪಿಯ ಕೃಷ್ಣ ಮಠದಲ್ಲಿರುವ ಕೃಷ್ಣನ ವಿಗ್ರಹ, ವೃಂದಾವನದ ರಾಧಾ ರಮಣ ದೇವಸ್ಥಾನದ ಮೂರ್ತಿ, ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಿಷ್ಣು ವಿಗ್ರಹ ಮತ್ತು ಗಡವಾಲ್ನ ಬದ್ರೀನಾಥ ಮಂದಿರದ ವಿಷ್ಣು ವಿಗ್ರಹವನ್ನು ಸಾಲಿಗ್ರಾಮ ಶಿಲೆಗಳಿಂದ ನಿರ್ಮಿಸಲಾಗಿದೆ.