ನಾಯಕನಾಗಿ ಗಿಲ್ ಮ್ಯಾಜಿಕ್ – ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ ಗೆದ್ದ ಟೀಮ್ ಇಂಡಿಯಾ

ನಾಯಕನಾಗಿ ಗಿಲ್ ಮ್ಯಾಜಿಕ್ – ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ ಗೆದ್ದ ಟೀಮ್ ಇಂಡಿಯಾ

ಲಕ್ನೋದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಜೊತೆಗೆ ಸರಣಿ ಕೂಡಾ ಗೆದ್ದುಕೊಂಡಿದೆ. ಈ ಮೂಲಕ  ಶುಭ್​ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ:AFG ಚೆಂಡಾಡಿದ ಗಿಲ್ & ಕಿಶನ್ – ಫಸ್ಟ್ ಬಾಲಲ್ಲೇ ಎಡವಿದ KL

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿ ಸರಣಿ ಕೈವಶ ಮಾಡಿಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 402 ರನ್‌ ಕಲೆಹಾಕಿತು. ಆರಂಭಿಕರಾಗಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ 4 ರನ್‌ಗಳಿಗೆ ಔಟಾದರು. ನಂತರ ಅರ್ಧಶತಕದ ಹೊಸ್ತಿಲಲ್ಲಿ ರೋಹಿತ್ ಶರ್ಮಾ ಔಟಾದರು. 39 ಎಸೆತಗಳಲ್ಲಿ 48 ರನ್ ಗಳಿಸಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ರೋಹಿತ್ ಔಟಾದ ನಂತರ ಬಂದ ಇಶಾನ್ ಕಿಶನ್, ಶುಭ್​ಮನ್ ಗಿಲ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಇಬ್ಬರೂ ಮೂರನೇ ವಿಕೆಟ್‌ಗೆ 141 ಎಸೆತಗಳಲ್ಲಿ 224 ರನ್​ಗಳ ಜೊತೆಯಾಟವನ್ನಾಡಿದರು. ಇದೇ ವೇಳೆ ಗಿಲ್ 77 ಎಸೆತಗಳಲ್ಲಿ ಶತಕ ಪೂರೈಸಿದರೆ, ಇತ್ತ ಇಶಾನ್ ಕಿಶನ್ ಕೇವಲ 71 ಎಸೆತಗಳಲ್ಲಿ ಶತಕ ಬಾರಿಸಿದರು. ಇಶಾನ್ ಕಿಶನ್ 125 ರನ್‌ಗಳಿಗೆ ಔಟಾದರೆ, ಗಿಲ್ 154 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇಂಡಿಯಾ ಭರ್ಜರಿ ಬ್ಯಾಟಿಂಗ್ ನೋಡಿ 450 ರನ್ ಬರಬಹುದು ಎಂದೇ ಅಂದಾಜು ಮಾಡಲಾಗಿತ್ತು. ಆದರೆ, ಗಿಲ್ ಔಟಾದ ಮೇಲೆ ತಂಡದ ಇನ್ನಿಂಗ್ಸ್ ಕುಸಿಯಿತು. ತಂಡವು ತನ್ನ ಕೊನೆಯ ಎಂಟು ವಿಕೆಟ್‌ಗಳನ್ನು 82 ರನ್‌ಗಳಿಗೆ ಕಳೆದುಕೊಂಡಿತು. 402 ರನ್ ಗಳಿಗೆ ಟೀಮ್ ಇಂಡಿಯಾ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. 402 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 52 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ರಹಮಾನುಲ್ಲಾ 41 ರನ್‌ಗಳಿಗೆ ಔಟಾದರೆ, ಇಬ್ರಾಹಿಂ ಜದ್ರಾನ್ 21 ರನ್‌ಗೆ ಔಟಾದರು. ದರ್ವಿಶ್ ರಸೂಲ್ ಗಾಯದಿಂದ ರಿಟೈರ್ಡ್ ಹರ್ಟ್​ ಆಗಿ ಡಗೌಟ್ ಸೇರಿಕೊಂಡರು. ರಹಮತ್ ಶಾ 89 ಎಸೆತಗಳಲ್ಲಿ 79 ರನ್‌ಗಳ ಹೋರಾಟದ ಇನ್ನಿಂಗ್ಸ್ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಟೀಮ್ ಇಂಡಿಯಾ ಪರ ಬೌಲರ್ಸ್ ಕೂಡಾ ಶೈನ್ ಆದರು. ಬೌಲಿಂಗ್‌ನಲ್ಲಿ ಮಿಂಚಿದ ಗುರ್ನೂರ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಪ್ರಿನ್ಸ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರು.

Sulekha

Leave a Reply

Your email address will not be published. Required fields are marked *