ನಿಪಾ ವೈರಸ್ ಭಯ – ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಕಟ್ಟೆಚ್ಚರ!

ನಿಪಾ ವೈರಸ್ ಭಯ – ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಕಟ್ಟೆಚ್ಚರ!

ಕೊರೊನಾದ ನಂತ್ರ ವಿಶ್ವದಲ್ಲಿ ನಿಪಾ ವೈರಸ್ ಭಯ ಶುರುವಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ನಿಪಾ ವೈರಸ್ ಹರಡಿದ ನಂತರ ರಾಜ್ಯ ಆರೋಗ್ಯ ಅಧಿಕಾರಿಗಳು ಕೇರಳ- ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಕರ್ನಾಟಕದ ಗಡಿಯಲ್ಲೂ ಹೆಚ್ಚಿನ ಅಲರ್ಟ್ ವಹಿಸಲಾಗಿದೆ. ಕೇರಳದಿಂದ ಬರುವ ಜನರಿಗೆ ಪರೀಕ್ಷೆ ನಡೆಸಿದ ನಂತರವೇ ತಮಿಳುನಾಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ ಒಬ್ಬ ವ್ಯಕ್ತಿಗೆ ನಿಪಾ ವೈರಸ್ ತಗುಲಿರುವುದು ದೃಢಪಟ್ಟಿದೆ . ಆತನ ಸಂಪರ್ಕಕ್ಕೆ ಬಂದ ಸುಮಾರು 77 ಜನರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೇರಳದ ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನಲ್ಲಿ ಹೆಚ್ಚಿನ ಎಚ್ಚರ ವಹಿಸಲಾಗಿದೆ.

ಕಿಟ್‌ ಮತ್ತು ಫೇಸ್ ಮಾಸ್ಕ್ ಧರಿಸಿದ ಆರೋಗ್ಯ ಇಲಾಖೆಯ ಕಾರ್ಯಕರ್ತರು ಕೇರಳ -ತಮಿಳುನಾಡು ಗಡಿಯಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಕೇರಳದಿಂದ ಬರುವ ವಾಹನಗಳನ್ನು ನಿಲ್ಲಿಸಿ, ಅವುಗಳಲ್ಲಿ ಪ್ರಯಾಣಿಸುವ ಜನರಲ್ಲಿ ಜ್ವರ ಮತ್ತು ನಿಪಾ ವೈರಸ್ ಸೋಂಕಿದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಇದರ ನಂತರವೇ ಅವರನ್ನು ತಮಿಳುನಾಡಿಗೆ ಬರಲು ಅನುಮತಿಸಲಾಗುತ್ತದೆ.

ಇದನ್ನೂ ಓದಿ: ಒಂದೇ ದಿನ 3 ರೆಡ್ ಕಾರ್ಡ್..! – ಫುಟ್ಬಾಲ್ ಮೈದಾನದಿಂದಲೇ ಹೊರನಡೆದ ಆಟಗಾರರು

ನಿಪಾ ವೈರಸ್ ಸೋಂಕು ಬಾವಲಿಗಳು ಮತ್ತು ಹಂದಿಗಳು ಸೇರಿದಂತೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳ ಮಲ ಅಥವಾ ಲಾಲಾರಸದಿಂದ ಕಲುಷಿತಗೊಂಡ ಹಣ್ಣುಗಳನ್ನು ಮನುಷ್ಯರು ತಿಳಿಯದೆ ಸೇವಿಸಿದಾಗ ಅಥವಾ ವೈರಸ್ ಸೋಂಕಿತ ಹಂದಿಗಳು, ಕುದುರೆಗಳು ಮತ್ತು ನಾಯಿಗಳು ಸೇರಿದಂತೆ ಪ್ರಾಣಿಗಳ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ.

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಹಾಗೂ ತಮಿಳುನಾಡಿನ ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರುವ ಪ್ರಯಾಣಿಕರಿಗೆ ಜ್ವರ, ತಲೆನೋವು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಇವೆಯೇ ಎಂದು ಗಡಿಗಳಲ್ಲೇ ತಪಾಸಣೆ ನಡೆಸಲಾಗುತ್ತಿದೆ. ತರಕಾರಿ ಅಥವಾ ಹಣ್ಣುಗಳನ್ನು ಹೊತ್ತ ವಾಹನಗಳ ಮೇಲೂ ನಿಗಾ ಇಡಲಾಗಿದೆ.

ವೈರಸ್ ಲಕ್ಷಣ 

  • ತೀವ್ರ ಜ್ವರ ಮತ್ತು ತೀವ್ರ ತಲೆನೋವು
  • ಸ್ನಾಯು ನೋವು ಮತ್ತು ಗಂಟಲು ನೋವು
  • ತಲೆತಿರುಗುವಿಕೆ ಮತ್ತು ವಾಂತಿ, ಅಸ್ವಸ್ಥತೆ
  • ಉಸಿರಾಟದ ತೊಂದರೆ

Kishor KV

Leave a Reply

Your email address will not be published. Required fields are marked *