ಜೀವನ ಈಗಷ್ಟೇ ಆರಂಭವಾಗಿದೆ ಗೆಳೆಯ – ಜೆಂಟಲ್‌ಮನ್‌ ಕ್ರಿಕೆಟರ್ ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಭಾವುಕ

ಜೀವನ ಈಗಷ್ಟೇ ಆರಂಭವಾಗಿದೆ ಗೆಳೆಯ – ಜೆಂಟಲ್‌ಮನ್‌ ಕ್ರಿಕೆಟರ್ ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಭಾವುಕ

ನ್ಯೂಝಿಲೆಂಡ್ ಸ್ಟಾರ್ ಕ್ರಿಕೆಟರ್ ಕೇನ್ ವಿಲಿಯಮ್ಸನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕಿವೀಸ್ ಪರ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿರುವ ಕೇನ್ ವಿಲಿಯಮ್ಸನ್ ನಿವೃತ್ತಿ ಘೋಷಣೆ ಬಳಿಕ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಜೊತೆಗೆ ಆಪ್ತ ಗೆಳಯನಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODI

ಜೂನ್ 12, 2026 ರಂದು ನ್ಯೂಝಿಲೆಂಡ್​ನ ಶ್ರೇಷ್ಠ ಬ್ಯಾಟರ್ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಕೇನ್ ವಿಲಿಯಮ್ಸನ್ ನಿವೃತ್ತಿ ಘೋಷಿಸುತ್ತಿದ್ದಂತೆ ಅವರ ಆಪ್ತ ಗೆಳೆಯ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ತಮ್ಮ ಅಧಿಕೃತ ಎಕ್ಸ್  ಖಾತೆಯಲ್ಲಿ ಸ್ನೇಹಿತನಿಗೆ ಶುಭ ಹಾರೈಸಿದ್ದಾರೆ. “ವರ್ಷಗಳ ಪಯಣದಲ್ಲಿ ಒಬ್ಬ ಕಠಿಣ ಎದುರಾಳಿಯಿಂದ ಅತ್ಯಾಪ್ತ ಗೆಳೆಯನಾಗಿ ಬದಲಾದ ಕಥೆ ನಮ್ಮದು. ಕೇನ್, ಇಷ್ಟು ವರ್ಷಗಳ ಕಾಲ ನಿನ್ನ ಅದ್ಭುತ ಬ್ಯಾಟಿಂಗ್ ನೋಡುವುದು ಮತ್ತು ನಿನ್ನ ವಿರುದ್ಧ ಸ್ಪರ್ಧಿಸುವುದು ನನಗೆ ಸಿಕ್ಕ ದೊಡ್ಡ ಹೆಮ್ಮೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಮತ್ತು ಅದರಾಚೆಗಿನ ನಮ್ಮ ಸ್ನೇಹ ಹಾಗೂ ನಾವು ಹಂಚಿಕೊಂಡ ಆಲೋಚನೆಗಳಿಗೆ ನಾನು ಹೆಚ್ಚಿನ ಗೌರವ ನೀಡುತ್ತೇನೆ. ನಾವು ಭೇಟಿಯಾದ ಹಾಗೂ ಮಾತನಾಡಿದ ಪ್ರತಿ ಕ್ಷಣವನ್ನೂ ನಾನು ಸದಾ ನೆನಪಿಸಿಕೊಳ್ಳುತ್ತೇನೆ. ನನ್ನ ಸಹೋದರನಿಗೆ ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು. ನೀನು ನಿನ್ನ ಪಾಲಿನ ಕರ್ತವ್ಯವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೀಯಾ, ಈಗ ವಿಶ್ರಾಂತಿ ಪಡೆಯುವ ಸಮಯ. ಜೀವನ ಈಗಷ್ಟೇ ಆರಂಭವಾಗಿದೆ ಗೆಳೆಯ, ವೆಲ್ ಡನ್!” ಎಂದು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರೂ ಆಪ್ತ ಗೆಳೆಯರು. ಆಧುನಿಕ ಕ್ರಿಕೆಟ್‌ನ ಫ್ಯಾಬ್ ಫೋರ್ ಜೋಡಿಯೆಂದೇ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಫೇಮಸ್ ಆಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ 16 ವರ್ಷಗಳ ಕಾಲ ಈ ಜೋಡಿಯ ಪಯಣ ಸಾಗಿದೆ. ಮುಂದುವರಿಯಿತು. ಮೈದಾನದಲ್ಲಿ ಎಷ್ಟೇ ತೀವ್ರ ಪೈಪೋಟಿ ಇದ್ದರೂ, ಇವರಿಬ್ಬರ ನಡುವಿನ ಸೌಜನ್ಯ ಮತ್ತು ಕ್ರೀಡಾ ಸ್ಫೂರ್ತಿ ಎಂದಿಗೂ ಕಡಿಮೆಯಾಗಲಿಲ್ಲ. 2020 ರ ನ್ಯೂಝಿಲೆಂಡ್ ಪ್ರವಾಸದ ವೇಳೆ ಇಬ್ಬರೂ ಬೌಂಡರಿ ಗೆರೆಯ ಬಳಿ ಕುಳಿತು ಮಾತನಾಡುತ್ತಿದ್ದ ಚಿತ್ರ ಇಂದಿಗೂ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕೇನ್ ವಿಲಿಯಮ್ಸನ್ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಕಿವೀಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. 2021 ರ ಚೊಚ್ಚಲ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ತಂಡವನ್ನೇ ಸೋಲಿಸಿ ನ್ಯೂಝಿಲೆಂಡ್‌ಗೆ ಐತಿಹಾಸಿಕ ಟ್ರೋಫಿ ತಂದುಕೊಟ್ಟ ಕೀರ್ತಿ ಇವರದ್ದಾಗಿದೆ.

ವಿಲಿಯಮ್ಸನ್ ಅವರದ್ದು ಶಾಂತ ಸ್ವಭಾವ ಮತ್ತು ಅಪ್ರತಿಮ ಕ್ರೀಡಾ ಮನೋಭಾವದಿಂದಾಗಿ, ವಿರಾಟ್ ಕೊಹ್ಲಿ ಸೇರಿದಂತೆ ಜಗತ್ತಿನ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಜೆಂಟಲ್‌ಮನ್ ಕ್ರಿಕೆಟರ್‌ ನಿವೃತ್ತಿ ಜೀವನ ಶುಭವಾಗಲಿ ಎಂದು ಶುಭಾಶಯ ಕೋರುತ್ತಿದ್ದಾರೆ.

Sulekha

Leave a Reply

Your email address will not be published. Required fields are marked *