ಮೀನು ಪ್ರಿಯರಿಗೆ ಮಳೆಗಾಲದ ಶಾಕ್ – ಮಳೆಯಿಲ್ಲದೇ ಮೀನುಗಳು ಸಿಗುತ್ತಿಲ್ಲ, ಮೀನುಗಾರರ ಹೊಟ್ಟೆ ತುಂಬುತ್ತಿಲ್ಲ

ಮೀನು ಪ್ರಿಯರಿಗೆ ಮಳೆಗಾಲದ ಶಾಕ್ – ಮಳೆಯಿಲ್ಲದೇ ಮೀನುಗಳು ಸಿಗುತ್ತಿಲ್ಲ, ಮೀನುಗಾರರ ಹೊಟ್ಟೆ ತುಂಬುತ್ತಿಲ್ಲ

ಕರಾವಳಿಯಲ್ಲಿ ಅನೇಕರು ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಬಲೆ ಹಾಕಿ ಮೀನು ಹಿಡಿಯೋಣ ಅಂದರೆ ಮೀನು ಸಿಗುತ್ತಿಲ್ಲ. ಇದರ ಜೊತೆಗೆ ಮೀನುಪ್ರಿಯರಿಗಂತೂ ಮೀನಿನ ಬೆಲೆ ಕೇಳಿಯೇ ತಲೆತಿರುಗುತ್ತಿದೆ.

ಇದನ್ನೂ ಓದಿ:ಕೊಹ್ಲಿ SLOTನಲ್ಲಿ ಇಶಾನ್ ಕಿಶನ್ – ವಿಕೆಟ್ ಕೀಪಿಂಗ್ KLಗೆ ಸಿಗಲ್ವಾ?

ನಮ್ಮ ಕರಾವಳಿಯಲ್ಲಿ ಮಳೆ ಬಂದರೂ ಕಷ್ಟ. ಮಳೆ ಬರದೇ ಇದ್ದರೂ ಕಷ್ಟ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಸಮುದ್ರದಲ್ಲಿ ಮೀನು ಸಿಗುತ್ತಿಲ್ಲ. ಅದರಲ್ಲೂ ಮಂಗಳೂರಿನಿಂದ ಉಳ್ಳಾಲದವರೆಗಿನ ಸಾವಿರಾರು ಮೀನುಗಾರರು ಕೈಯಲ್ಲಿ ಕಾಸಿಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಜೂನ್ 1 ರಿಂದ 61 ದಿನಗಳ ಕಾಲ ಯಾಂತ್ರಿಕ ಬೋಟುಗಳ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿದೆ. ಆದರೆ ನಮ್ಮ ನಾಡದೋಣಿ ಮೀನುಗಾರರಿಗೆ ಇದೇ ಸುಗ್ಗಿಯ ಕಾಲ. ಆದರೆ ಈ ಬಾರಿ ಸಮುದ್ರವೇ ಕೈಕೊಟ್ಟಿದೆ. ನಾಡದೋಣಿಗೆ ಮೀನು ಸಿಗಬೇಕಾದರೆ ಭಾರೀ ಮಳೆ ಸುರಿದು, ತೂಫಾನ್ ಎದ್ದು ಸಮುದ್ರದಲ್ಲಿ ಅಲೆಗಳ ‘ಮಥನ’ ನಡೆಯಬೇಕು. ಆಗಷ್ಟೇ ತಳದಲ್ಲಿರುವ ಮೀನುಗಳು ಮೇಲೆ ಬರುತ್ತವೆ. ಜೊತೆಗೆ, ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿ ಆ ಸಿಹಿನೀರು ಕಡಲಿಗೆ ಸೇರಿದಾಗ ಉಂಟಾಗುವ ‘ಸಿಹಿ-ಉಪ್ಪು ನೀರಿನ ಕಾಂಬಿನೇಷನ್’ ಹುಡುಕಿಕೊಂಡು ಬಂಗಡೆ, ಬೂತಾಯಿ, ಕೆಲ ಸಣ್ಣ ಮೀನುಗಳು ದಡಕ್ಕೆ ಬರುತ್ತವೆ. ಆದರೆ ಈ ವರ್ಷ ಮಳೆಯೂ ಇಲ್ಲ, ತೂಫಾನ್ ಕೂಡ ಇಲ್ಲ. ಹೀಗಾಗಿ ಮೀನುಗಳು ಆಳ ಸಮುದ್ರ ಸೇರಿಕೊಂಡಿವೆ. ಮಂಗಳೂರಿನ ಸಸಿಹಿತ್ಲುವಿನಿಂದ ಉಳ್ಳಾಲದವರೆಗಿನ 250 ನಾಡದೋಣಿಗಳ ಮಾಲೀಕರು ಮತ್ತು 1,400ಕ್ಕೂ ಹೆಚ್ಚು ಮೀನುಗಾರರು ಈಗ ಕಂಗಾಲಾಗಿದ್ದಾರೆ.

ಮಾರುಕಟ್ಟೆಯಲ್ಲೂ ಕೂಡಾ ಮೀನಿನ ಬರ ಎದುರಾಗಿದೆ. ಬಂಗಡೆ ರೇಟ್ ಕೆಜಿಗೆ ಬರೋಬ್ಬರಿ 400 ರೂಪಾಯಿ ದಾಟಿದೆ. ಇನ್ನು ಈ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ನಾಡದೋಣಿಗಳು ಕೂಡಾ ಸಮುದ್ರಕ್ಕೆ ಇಳಿಯುತ್ತಿಲ್ಲ. ಒಟ್ಟಾರೆ ಹೇಳುವುದಾದರೆ ಮೀನುಪ್ರಿಯರಿಗೂ ಕಷ್ಟ. ಮೀನುಗಾರರಿಗೂ ಜೀವನ ಕಷ್ಟ.

Sulekha

Leave a Reply

Your email address will not be published. Required fields are marked *