ನಿಮ್ಮ ಈ ತಪ್ಪಿನಿಂದಲೇ ಶುರುವಾಗುತ್ತೆ ಆರೋಗ್ಯ ಸಮಸ್ಯೆ! – ಊಟದ ಬಳಿಕ ಕುಳಿತುಕೊಳ್ಳುವುದು ಎಷ್ಟು ಡೇಂಜರ್?

ಇತ್ತೀಚಿನ ಜೀವನಶೈಲಿಯಲ್ಲಿ ಅನೇಕರು ಊಟ ಮಾಡಿದ ಕೂಡಲೇ ಕುಳಿತುಕೊಳ್ಳುವುದು ಅಥವಾ ಮಲಗುವ ಅಭ್ಯಾಸ ಹೊಂದಿದ್ದಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಅಭ್ಯಾಸವು ದೇಹಕ್ಕೆ ಗಂಭೀರ ಹಾನಿ ಉಂಟುಮಾಡಬಹುದು. ವಿಶೇಷವಾಗಿ ಜೀರ್ಣಕ್ರಿಯೆ ಸಮಸ್ಯೆ, ಅಧಿಕ ತೂಕದ ಸಮಸ್ಯೆ, ಡಯಾಬಿಟಿಸ್ ಸೇರಿದಂತೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ನಾಳೆಯಿಂದ ಕಾಲ್ಚೆಂಡಿನ ಜಾದೂಗಾರರ ಅಬ್ಬರ – 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಹಬ್ಬಕ್ಕೆ ಕೌಂಟ್ ಡೌನ್
ಆಹಾರ ಸೇವಿಸಿದ ನಂತರ ದೇಹಕ್ಕೆ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸ್ವಲ್ಪ ಚಟುವಟಿಕೆ ಅಗತ್ಯವಿರುತ್ತದೆ. ಆದರೆ ಊಟವಾದ ತಕ್ಷಣ ಕುಳಿತುಕೊಳ್ಳುವುದು ಅಥವಾ ಸೋಫಾದಲ್ಲಿ ವಿಶ್ರಾಂತಿ ಪಡೆಯುವುದು ಜೀರ್ಣಕ್ರಿಯೆಯ ವೇಗವನ್ನ ನಿಧಾನಗೊಳಿಸುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಜೀರ್ಣ ಮತ್ತು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಹೆಚ್ಚಾಗಬಹುದು.
ತಜ್ಞರ ಪ್ರಕಾರ, ಊಟದ ನಂತರ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿದ್ದರೆ ದೇಹದಲ್ಲಿ ಕ್ಯಾಲೊರಿಗಳು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗಲು ಆರಂಭವಾಗುತ್ತದೆ. ಇದು ಅಧಿಕ ತೂಕಕ್ಕೆ ಪ್ರಮುಖ ಕಾರಣವಾಗಬಹುದು. ವಿಶೇಷವಾಗಿ ರಾತ್ರಿ ಊಟದ ನಂತರ ತಕ್ಷಣ ಮಲಗುವ ಅಭ್ಯಾಸ ಹೊಂದಿರುವವರಲ್ಲಿ ತೂಕ ಹೆಚ್ಚುವಿಕೆ ವೇಗವಾಗಿ ಕಾಣಿಸಿಕೊಳ್ಳಬಹುದು.
ಇದೇ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ ತಕ್ಷಣ ಏರಿಕೆಯಾಗುವ ಸಾಧ್ಯತೆ ಇದೆ. ನಿಯಮಿತವಾಗಿ ಊಟದ ನಂತರ ಚಲನವಲನ ಇಲ್ಲದಿದ್ದರೆ ಟೈಪ್-2 ಡಯಾಬಿಟಿಸ್ ಅಪಾಯ ಹೆಚ್ಚಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ರಕ್ತದ ಒತ್ತಡ ಹೆಚ್ಚುವಿಕೆಯ ಅಪಾಯವೂ ಇದರಿಂದ ಹೆಚ್ಚಾಗುವ ಸಾಧ್ಯತೆ ಇದೆ.
ಆರೋಗ್ಯ ತಜ್ಞರ ಸಲಹೆಯಂತೆ ಊಟದ ನಂತರ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ನಿಧಾನವಾಗಿ ನಡೆದುಬರುವುದು ಉತ್ತಮ. ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಣದಲ್ಲಿಡಲು ಸಹಕಾರಿ ಆಗುತ್ತದೆ.
ವಿಶೇಷವಾಗಿ ಕಚೇರಿ ಕೆಲಸ ಮಾಡುವವರು ಅಥವಾ ಹೆಚ್ಚು ಸಮಯ ಕುಳಿತುಕೊಂಡೇ ಕೆಲಸ ಮಾಡುವವರು ಊಟದ ನಂತರ ಸ್ವಲ್ಪ ಚಲನವಲನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಅನುಸರಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ನೋಡಿರಿ

