ನಾಳೆಯಿಂದ ಕಾಲ್ಚೆಂಡಿನ ಜಾದೂಗಾರರ ಅಬ್ಬರ – 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಹಬ್ಬಕ್ಕೆ ಕೌಂಟ್ ಡೌನ್

ನಾಳೆಯಿಂದ ಕಾಲ್ಚೆಂಡಿನ ಜಾದೂಗಾರರ ಅಬ್ಬರ – 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಹಬ್ಬಕ್ಕೆ ಕೌಂಟ್ ಡೌನ್

ಜಗತ್ತಿನ ಅತೀ ಹೆಚ್ಚು ಜನಪ್ರಿಯತೆ ಹೊಂದಿರುವ ಫಿಫಾ ವಿಶ್ವಕಪ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. 23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಈ ಬಾರಿಯ ಟೂರ್ನಿಗಾಗಿ 16 ಕ್ರೀಡಾಂಗಣಗಳು ಸಿದ್ಧವಾಗಿವೆ. ಜೂನ್ 11ರಿಂದ ಶುರುವಾಗುವ ಈ ಜಾಗತಿಕ ಕ್ರೀಡಾ ಹಬ್ಬ ಕೇವಲ ಒಂದು ಫುಟ್‌ಬಾಲ್ ಟೂರ್ನಿಯಾಗಿರದೆ, ಪ್ರಪಂಚದಾದ್ಯಂತದ ಕೋಟ್ಯಂತರ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಹಬ್ಬವೂ ಆಗಿದೆ.  48 ತಂಡಗಳು, 104 ಪಂದ್ಯಗಳು, 16 ಆತಿಥೇಯ ನಗರಗಳು ಹಾಗೂ ವಿಶ್ವದ ಶ್ರೇಷ್ಠ ಆಟಗಾರರ ಕದನವು ಫುಟ್‌ಬಾಲ್ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಲಿದೆ.

ಇದನ್ನೂ ಓದಿ : ಹೆಡ್‌ಕೋಚ್ ಕೋಟಾದಲ್ಲಿ ರಾಣಾಗೆ ಚಾನ್ಸ್! – RO-KO, ಶಮಿಗಿರೋ ರೂಲ್ಸ್‌ ಶಿಷ್ಯನಿಗಿಲ್ಲ!

2026ರ ಫುಟ್ ಬಾಲ್ ಮಹಾಸಮರಕ್ಕೆ ವಿಶ್ವದಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾಯ್ತಿದ್ದಾರೆ. ಫುಟ್‌ಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳು ಜಂಟಿಯಾಗಿ ಈ ಪ್ರತಿಷ್ಠಿತ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಈ ಬಾರಿಯ ಅತಿ ದೊಡ್ಡ ವಿಶೇಷವಾಗಿದೆ. ಈ ಹಿಂದೆ 32 ತಂಡಗಳು ಮಾತ್ರ ಭಾಗವಹಿಸುತ್ತಿದ್ದ ಈ ಜಾಗತಿಕ ಹಣಾಹಣಿಯಲ್ಲಿ, ಈ ಬಾರಿ ಒಟ್ಟು 48 ತಂಡಗಳು ಕಣಕ್ಕಿಳಿಯಲಿವೆ. ಈ ಮೂಲಕ ವಿಶ್ವದ ವಿವಿಧ ಮೂಲೆಗಳ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಭೂತಪೂರ್ವ ಅವಕಾಶ ಸಿಕ್ಕಂತಾಗಿದೆ. ಒಟ್ಟು 104 ರೋಚಕ ಪಂದ್ಯಗಳು ನಡೆಯಲಿದ್ದು, ಇದು ಫುಟ್‌ಬಾಲ್ ಅಭಿಮಾನಿಗಳಿಗೆ ಅಕ್ಷರಶಃ ಒಂದು ತಿಂಗಳ ಕಾಲ ಕ್ರೀಡಾ ರಸದೌತಣವನ್ನು ನೀಡಲಿದೆ. ನಾಳೆ ಮೆಕ್ಸಿಕೊದ ಐತಿಹಾಸಿಕ ಎಸ್ಟಾಡಿಯೊ ಅಜ್ಟೆಕಾ ಬೃಹತ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಇದು ಮೂರನೇ ಬಾರಿಗೆ ವಿಶ್ವಕಪ್‌ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗುತ್ತಿದೆ.

ಸುದೀರ್ಘ ಒಂದು ತಿಂಗಳ ಈ ಹೈವೋಲ್ಟೇಜ್ ಫೈಟ್ ನಲ್ಲಿ ಜುಲೈ 19ರಂದು ನ್ಯೂಯಾರ್ಕ್-ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಬಹುನಿರೀಕ್ಷಿತ ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಆಗಿರುವ ಬಲಿಷ್ಠ ಅರ್ಜೆಂಟೀನಾ ತಂಡವು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಫುಟ್‌ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಅವರ ನಾಯಕತ್ವದಲ್ಲಿ ತಂಡವು ಮತ್ತೊಮ್ಮೆ ಮ್ಯಾಜಿಕ್ ಮಾಡುವ ನಿರೀಕ್ಷೆಯಿದೆ. ಕಳೆದ ಬಾರಿಯ ಕತಾರ್ ವಿಶ್ವಕಪ್ ಜಯದ ಉತ್ಸಾಹದಲ್ಲಿರುವ ಅರ್ಜೆಂಟೀನಾ, ಕಪ್ ಉಳಿಸಿಕೊಳ್ಳಲು ಕಠಿಣ ತರಬೇತಿಯಲ್ಲಿ ನಿರತವಾಗಿದೆ. 38 ವರ್ಷದ ಮೆಸ್ಸಿಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇರುವುದರಿಂದ, ಈ ಟೂರ್ನಿಯು ಅವರ ಅಭಿಮಾನಿಗಳಿಗೆ ಅತ್ಯಂತ ಭಾವುಕತೆಯಿಂದ ಕೂಡಿರಲಿದೆ.

ಈ ಬಾರಿ 48 ತಂಡಗಳು ಕಣಕ್ಕಿಳಿಯುತ್ತಿದ್ದು, ತಂಡಗಳ ಸಂಖ್ಯೆ ಹೆಚ್ಚಾದಂತೆ ಬಹುಮಾನದ ಮೊತ್ತವನ್ನೂ ಫಿಫಾ ಹೆಚ್ಚಿಸಿದೆ. ಒಟ್ಟು ₹6,238.42 ಕೋಟಿ ರೂಪಾಯಿ ಬಹುಮಾನದ ಹಣವನ್ನು ಫಿಫಾ ನೀಡಲಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಇತರೆ ಖರ್ಚುಗಳನ್ನು ಸೇರಿಸಿದರೆ, ಒಟ್ಟು ಮೊತ್ತ ₹7,400 ಕೋಟಿಗೂ ಹೆಚ್ಚು ಆಗಲಿದೆ. ಈ ಬಾರಿ ವಿಶ್ವ ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ ₹417.50 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಇದು ಕಳೆದ ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾಗೆ ಸಿಕ್ಕಿದ್ದಕ್ಕಿಂತ ₹76 ಕೋಟಿ ಹೆಚ್ಚು. ಇನ್ನು ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹288 ಕೋಟಿ, ಮೂರನೇ ಸ್ಥಾನಕ್ಕೆ ₹254.675 ಕೋಟಿ ಮತ್ತು ನಾಲ್ಕನೇ ಸ್ಥಾನಕ್ಕೆ ₹237 ಕೋಟಿ ರೂಪಾಯಿ ಸಿಗಲಿದೆ.

Shantha Kumari

Leave a Reply

Your email address will not be published. Required fields are marked *