ಪೆದ್ದಿ ಸಿನಿಮಾದ ಆ ಸೀನ್ ಕಟ್ – ಜಾನ್ವಿ ಕಪೂರ್ ನೋವು ಈಗ ದೂರವಾಯ್ತಾ?

ಪೆದ್ದಿ ಸಿನಿಮಾದ ಆ ಸೀನ್ ಕಟ್ – ಜಾನ್ವಿ ಕಪೂರ್ ನೋವು ಈಗ ದೂರವಾಯ್ತಾ?

ಪೆದ್ದಿ ಸಿನಿಮಾದಲ್ಲಿ ರಾಮಚರಣ್‌ ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಆದರೆ, ಇಡೀ ಚಿತ್ರದಲ್ಲಿ ಜಾನ್ವಿ ಕಪೂರ್ ಅವರನ್ನು ತೋರಿಸಿದ ರೀತಿ ಬಗ್ಗೆ ವಿವಾದ ಶುರುವಾಗಿತ್ತು. ಅದರಲ್ಲೂ ಕೆಲವೊಂದು ಸೀನ್ ನೋಡೋಕೆ ಕಷ್ಟವಾಗಿತ್ತು ಅನ್ನೋ ಚರ್ಚೆ ಶುರುವಾಗಿತ್ತು. ಕೊನೆಗೂ ಅಂಥಾ ಸೀನ್‌ಗಳಿಗೆ ಕತ್ತರಿ ಹಾಕಿದ್ದಾರೆ ನಿರ್ದೇಶಕರು.

ಇದನ್ನೂ ಓದಿ:ತೆರೆ ಮೇಲೆ ಪೆದ್ದಿ ಪವರ್ – ರಾಮ್‌ಚರಣ್, ಶಿವಣ್ಣ ಜೋಡಿಗೆ ಅಭಿಮಾನಿಗಳ ಬಹುಪರಾಕ್

ರಾಮ್ ಚರಣ್ ನಟನೆಯ ಪೆದ್ದಿ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂಬ ವಿವಾದ ದಿನಕಳೆದಂತೆ ಜೋರಾಗಿದೆ. ಇದೀಗ ತೀವ್ರ ವಿರೋಧದ ಬೆನ್ನಲ್ಲೇ, ನಿರ್ದೇಶಕ ಬುಚ್ಚಿ ಬಾಬು ಸನಾ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರೇಕ್ಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅಚಿಯಮ್ಮ ಎಂಬ ಪಾತ್ರ ಮಾಡಿದ್ದರು. ಕೇವಲ ಜಾನ್ವಿ ಅವರ ದೈಹಿಕ ಸೌಂದರ್ಯವನ್ನು ಅನಗತ್ಯವಾಗಿ ತೋರಿಸಲಾಗಿದೆ ಎಂಬ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಈ ರೀತಿ ತೋರಿಸಿದ್ದು ಸ್ವತಃ ಜಾನ್ವಿ ಕಪೂರ್ ಅವರಿಗೂ ಬೇಸರವಾಗಿದೆ ಎಂದು ಹೇಳಲಾಗಿತ್ತು.  ವಿವಾದದ ತೀವ್ರತೆಯನ್ನು ಅರಿತ ನಿರ್ದೇಶಕರು ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಕ್ಷಮೆಯಾಚಿಸಿದ್ದರು. ‘ಬೆಳ್ಳಿತೆರೆಯ ಮೇಲಿರಲಿ ಅಥವಾ ನಿಜ ಜೀವನದಲ್ಲಿರಲಿ, ನಾನು ಯಾವಾಗಲೂ ಮಹಿಳೆಯರಿಗೆ ಅಪಾರ ಗೌರವ ನೀಡುತ್ತೇನೆ. ಯಾವುದೇ ಮಹಿಳಾ ಪಾತ್ರವನ್ನು ಕೀಳಾಗಿ ಅಥವಾ ವಸ್ತುವಿನಂತೆ ಬಿಂಬಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಒಂದು ವೇಳೆ ಚಿತ್ರದ ಯಾವುದೇ ಭಾಗ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ನಾವು ಆ ಕಳಕಳಿಯನ್ನು ಗೌರವಿಸುತ್ತೇವೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ’ ಎಂದು ಬರೆದುಕೊಂಡಿದ್ದರು.

ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ನಿರ್ದೇಶಕ ಬುಚ್ಚಿ ಬಾಬು ಸನಾ, ‘ನನ್ನ ದೃಷ್ಟಿಯಲ್ಲಿ, ಒಂದು ಉತ್ತಮ ಕಥೆಯಲ್ಲಿ ಜಾನ್ವಿ ಕಪೂರ್ ಅವರ ಟ್ರ್ಯಾಕ್ ಅನಗತ್ಯವಾಗಿತ್ತು ಎಂದು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು ಸ್ವಲ್ಪ ವಿಭಿನ್ನ ಹಾಗೂ ರಗಡ್ ಆದ ಹಾದಿ ತುಳಿಯಲು ಬಯಸಿದ್ದೆ. ಏಕೆಂದರೆ ನಾಯಕ ಪೆದ್ದಿ ಬೆಟ್ಟದ ಪ್ರದೇಶಗಳಿಂದ ದೂರವಿರುವ ಒಂದು ಹಳ್ಳಿಗಾಡಿನ ಹಿನ್ನೆಲೆಯಿಂದ ಬಂದವನು. ಅವನ ಹಿನ್ನೆಲೆ ಮತ್ತು ಬೆಳೆದ ವಾತಾವರಣದಿಂದಾಗಿ ಅವನ ವರ್ತನೆ ಆ ರೀತಿ ಇರುತ್ತದೆ ಎಂಬುದನ್ನು ತೋರಿಸಿ, ಚಿತ್ರದ ಕೊನೆಯಲ್ಲಿ ಅದನ್ನು ತಿದ್ದುವ ಆಲೋಚನೆ ನನ್ನದಾಗಿತ್ತು. ಅಂತಹ ಪಾತ್ರವೊಂದು ತಾನು ಪ್ರೀತಿಸುವ ಮಹಿಳೆಯನ್ನೇ ಮದುವೆಯಾಗಬೇಕು ಎಂದು ಹಠ ಹಿಡಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಸೀನ್‌ಗಳು ಪ್ರೇಕ್ಷಕರಿಗೆ ತಪ್ಪು ಸಂದೇಶ ರವಾನಿಸುವಂತೆ ಮೂಡಿಬಂದಿವೆ. ನಾವು ತಕ್ಷಣವೇ ಎಚ್ಚೆತ್ತುಕೊಂಡು, ಆ ವಿವಾದಾತ್ಮಕ ದೃಶ್ಯಗಳನ್ನು ಸಿನಿಮಾದಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ ಎಂದು ಬುಚ್ಚಿ ಬಾಬು ಸನಾ ಹೇಳಿದ್ದಾರೆ.

ಅಚಿಯಮ್ಮ ಮತ್ತು ಪೆದ್ದಿ ನಡುವಿನ ಪ್ರಣಯದ ದೃಶ್ಯಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ನಾಯಕಿಯ ಇಷ್ಟವಿಲ್ಲದಿದ್ದರೂ ನಾಯಕ ಪ್ರೀತಿ ವ್ಯಕ್ತಪಡಿಸುವ ದೃಶ್ಯಗಳು, ಕತ್ತಲೆಯಲ್ಲಿ ನಾಯಕಿಗೆ ಬಲವಂತವಾಗಿ ಮುತ್ತಿಡುವ ದೃಶ್ಯದ ವಿರುದ್ಧ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ನಾಯಕಿಯ ವ್ಯಕ್ತಿತ್ವ ಅಥವಾ ಕಥೆಗೆ ಪ್ರಾಮುಖ್ಯತೆ ನೀಡುವ ಬದಲು ಆಕೆಯನ್ನು ಕೇವಲ ಒಂದು ವಸ್ತುವಿನಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

Sulekha

Leave a Reply

Your email address will not be published. Required fields are marked *