ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಘೋಷಣೆ – ಶಾಸಕನಾಗಿ ಮುಂದುವರೆಯುತ್ತೇನೆ ಎಂದ ಸೈಲೆಂಟ್ ನಾಯಕ

8 ಬಾರಿ ಶಾಸಕರು. 53 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ, ಇವರ ಜೊತೆಯಲ್ಲಿ ಶಾಸಕರಾದವರು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದವರೇ ಜಾಸ್ತಿ. ಎಲ್ಲೂ ಕೂಡಾ ನನಗೆ ಮಂತ್ರಿಗಿರಿ ಕೊಡಿ, ನನಗೆ ಇದೇ ಖಾತೆ ಕೊಡಿ ಎಂದು ಖ್ಯಾತೆ ತೆಗೆದವರಲ್ಲ. ಆದರೆ, ನಿಮಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀವಿ ಎಂದು ಮಾತು ಕೊಟ್ಟು ಕೈ ಕೊಟ್ಟವರ ಮೇಲೆ ಅಸಮಾಧಾನ ಅಷ್ಟೇ. ಕೊನೆಗೂ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಎಐಸಿಸಿ ಮಹತ್ವದ ಹುದ್ದೆ – ಕಾಂಗ್ರೆಸ್ ಹೈಕಮಾಂಡ್‌ನಿಂದ ನೇಮಕ
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಖಾತೆ ಹಂಚಿಕೆಯಾದ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಬೇಸರಗೊಂಡ ರಾಮಲಿಂಗಾರೆಡ್ಡಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮತ್ತು 8 ಬಾರಿ ಶಾಸಕರಾಗಿ, 6 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ರಾಮಲಿಂಗಾ ರೆಡ್ಡಿ ಇದೇ ಮೊದಲ ಬಾರಿ ತೀವ್ರ ಅಸಮಾಧಾನಗೊಂಡಿದ್ದು, ಕಚೇರಿಗೆ ಆಗಮಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಶುಕ್ರವಾರ ಬೆಳಗ್ಗೆಯೇ ಕಚೇರಿಗೆ ಆಗಮಿಸಿ ಪತ್ರಕ್ಕೆ ಸಹಿ ಹಾಕಿದ್ದು, ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ ಅವ್ರು, ನಾನು 1973 ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದೆ. ವೀರಪ್ಪ ಮೊಯ್ಲಿ ನನಗೆ ಕರೆದು ಟಿಕೆಟ್ ಕೊಟ್ರು. ಆರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರ ಬಳಿಯೂ ಇಂಥಹುದೇ ಖಾತೆ ಕೊಡಿ ಅಂತ ಲಾಬಿ ಮಾಡಿಲ್ಲ. ಅವರೇ ಎರಡು ಬಾರಿ ಕರೆದು ಬೆಂಗಳೂರು ಅಭಿವೃದ್ದಿ ಕೊಡ್ತೀವಿ ಅಂತ ಹೇಳಿ ಈಗ ಕೊಡಲಿಲ್ಲ. ಈ ವಿಚಾರಕ್ಕೆ ಬೇಸರವಾಗಿ ಈ ನಿರ್ಧಾರ ತೆಗೆದುಕೊಂಡಿರೋದಾಗಿ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಆಗಿ ಪ್ರಮಾಣವಚನ ಮಾಡುವ ಹಿಂದಿನ ದಿನವೇ ಹೋಗಿ ಭೇಟಿ ಮಾಡಿದ್ದೆ. ನಾನು ಯಾರಿಗೂ ಮಂತ್ರಿ ಮಾಡಿ ಅಂತ ಕೇಳಿಲ್ಲ. ಆದ್ರೆ ಅವರೇ ಕರೆದು ಬೆಂಗಳೂರು ಖಾತೆ ಕೊಡ್ತೀನಿ ಅಂದವರು ಇದೀಗ ಮಾತು ತಪ್ಪಿದ್ದಾರೆ ಎಂದು ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕು. ಸಿಎಂ ಡಿ.ಕೆ ಶಿವಕುಮಾರ್ ಈ ಬಗ್ಗೆ ಕೇಳಿದರೆ ಇದೆಲ್ಲಾ ಹೈಕಮಾಂಡ್ ನಿರ್ಧಾರ ಅಂತಾ ಹೇಳಿದ್ದರಂತೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಮಲಿಂಗಾ ರೆಡ್ಡಿಯವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದ್ದರು. ಆಗ ಡಿಕೆಶಿ ಬ್ರದರ್ಸ್ ಸೀದಾ ಹೋಗಿದ್ದೇ ರಾಮಲಿಂಗಾರೆಡ್ಡಿಯವರ ಮನೆಗೆ. ಬೆಳಗ್ಗೆ ಬಂದವರು ಸಂಜೆ ನಾಲ್ಕು ಗಂಟೆತನಕ ಖಾತೆಗಾಗಿ ರಾಮಲಿಂಗಾ ರೆಡ್ಡಿಯವರ ಮನವೊಲಿಸಿದ್ದರು. ಕೊನೆಗೂ ರಾಮಲಿಂಗಾ ರೆಡ್ಡಿಗೆ ಸಿಕ್ಕಿರುವ ಬೆಂಗಳೂರು ಅಭಿವೃದ್ಧಿಖಾತೆಯನ್ನು ತನಗೆ ಮಾಡಿಸಿಕೊಂಡಿದ್ದರು ಡಿಕೆ ಶಿವಕುಮಾರ್. ಆಗ ಮುಂದೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ನಿಮ್ಮಿಂದ ತೆಗೆದುಕೊಂಡ ಖಾತೆಯನ್ನೇ ನಿಮಗೆ ನೀಡುತ್ತೇನೆ ಎಂದು ಡಿಕೆಶಿ ಮಾತುಕೊಟ್ಟಿದ್ದರಂತೆ. ಇನ್ನೊಂದು ವಿಚಾರವೆಂದರೆ, ರಾಮಲಿಂಗಾ ರೆಡ್ಡಿಗೆ ಸಿಕ್ಕ ಖಾತೆಯನ್ನು ಡಿಕೆಶಿ ತನ್ನ ಬುಟ್ಟಿಗೆ ಹಾಕಿಕೊಳ್ಳುವಾಗ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇ ಫೈನಲ್ ಆಗಿರಲಿಲ್ವಾ?, ಈಗ ಡಿಕೆಶಿ ಪ್ರಕಾರ ಖಾತೆ ಹಂಚಿಕೆ ಹೈಕಮಾಂಡ್‌ಗೆ ಬಿಟ್ಟಿರುವುದಂತೆ. ಇದು ಕೂಡಾ ರಾಮಲಿಂಗಾರೆಡ್ಡಿಯವರ ಬೇಸರಕ್ಕೆ ಕಾರಣವಾಗಿದೆ.

ನೋಡಿರಿ

