ಎಬೋಲಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ – ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಸುತ್ತೋಲೆ

ಎಬೋಲಾ ವೈರಸ್ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದೊಂದು ಮಾರಣಾಂತಿಕ ಸಾಂಕ್ರಾಮಿಕ ರೋಗ. ಹೀಗಾಗಿ ಎಬೋಲಾ ವೈರಸ್ ತಡೆಗೆ ಆರೋಗ್ಯ ಇಲಾಖೆ ಸಜ್ಜಾಗಿದೆ.
ಇದನ್ನೂ ಓದಿ:ಮಳೆಗಾಲದ ಸಮಸ್ಯೆಗೆ ಇಲ್ಲಿದೆ ಪರಿಹಾರ – ಈ ಟಿಫ್ಸ್ಗಳನ್ನ ತಪ್ಪದೇ ಪಾಲಿಸಿ
ಎಬೋಲಾ ವೈರಸ್ ದೇಹದಿಂದ ದೇಹಕ್ಕೆ ಹರಡುತ್ತದೆ. ಗಾಳಿಯಿಂದ ಹರಡುವುದಿಲ್ಲ. ಸೋಂಕಿತ ವ್ಯಕ್ತಿಯ ದೇಹದ ದ್ರವಗಳು (ರಕ್ತ, ಜೊಲ್ಲು, ಬೆವರು) ಅಥವಾ ಅವರ ಬಳಸಿದ ವಸ್ತುಗಳ ನೇರ ಸಂಪರ್ಕದಿಂದ ಎಬೋಲಾ ವೈರಸ್ ಹರಡುತ್ತದೆ. ಹೀಗಾಗಿ ತೀವ್ರ ಜ್ವರ, ತಲೆನೋವು, ಸುಸ್ತು, ವಾಂತಿ, ಹೊಟ್ಟೆನೋವು ಇದ್ದರೂ ಕೂಡಾ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಆದರೆ, ಸಮಾಧಾನದ ವಿಚಾರವೆಂದರೆ, ರಾಜ್ಯದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ದೃಢಪಟ್ಟಿಲ್ಲ. ಮುನ್ನೆಚ್ಚರಿಕೆಯಾಗಿ ಕರ್ನಾಟಕ ಆರೋಗ್ಯ ಇಲಾಖೆ ಕೆಲವು ಕ್ರಮಕೈಗೊಂಡಿದೆ.
ಎಬೋಲಾ ವೈರಸ್ ತಡೆಗೆ ಆರೋಗ್ಯ ಇಲಾಖೆ ಸಜ್ಜಾಗಿದ್ದು, ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ. ಎಬೋಲಾ ಪ್ರಕರಣಗಳನ್ನು ತಕ್ಷಣವೇ IHIP ಮೂಲಕ ವರದಿ ಮಾಡುವಂತೆ ಸೂಚನೆ ನೀಡಿದೆ. ವರದಿ ಜೊತೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಮಾಹಿತಿ ನೀಡಲು ಸೂಚಿಸಿದೆ. WHO ಎಬೋಲಾವನ್ನು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿರುವ ಹಿನ್ನೆಲೆ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳಿಗೆ ಕೆಲವು ಮಾರ್ಗಸೂಚಿಗಳನ್ನ ಸರ್ಕಾರ ಹೊರಡಿಸಿದೆ. ಎಬೋಲಾ ಲಕ್ಷಣಗಳು ಹಾಗೂ ಪ್ರಯಾಣ ಹಿಸ್ಟರಿ ಇರುವ ರೋಗಿಗಳಿಗೆ ಎಚ್ಚರಿಕೆಯಿಂದ ತಪಾಸಣೆ ನಡೆಸಬೇಕು – ಶಂಕಿತ ಎಬೋಲಾ ಪ್ರಕರಣಗಳನ್ನು ತಕ್ಷಣವೇ IHIP (Integrated Health Information Platform) ಮೂಲಕ ವರದಿ ಮಾಡಬೇಕು – ಯಾವುದೇ ಶಂಕಿತ ಪ್ರಕರಣ ಕಂಡುಬಂದ ತಕ್ಷಣ ಸಂಬಂಧಿತ (DSO) ಮಾಹಿತಿ ನೀಡಬೇಕು – ರೋಗಿಗಳು ಹಾಗೂ ಅವರ ಸಂಪರ್ಕಿತರ ವಿವರಗಳನ್ನು ದಾಖಲಿಸಿಕೊಂಡು ಸಾಂಕ್ರಾಮಿಕ ರೋಗ ತನಿಖೆಗೆ ಸಹಕರಿಸಬೇಕು – ಸೋಂಕು ತಡೆ ಮತ್ತು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯವಿದ್ದಲ್ಲಿ ಐಸೋಲೇಷನ್ ಮತ್ತು PPE ಬಳಕೆ ಮಾಡಬೇಕು. ಎಬೋಲಾ ಪೀಡಿತ ಪ್ರದೇಶಕ್ಕೆ ಪ್ರಯಾಣ ಮಾಡಿದ ವ್ಯಕ್ತಿಗೆ ಜ್ವರ ಹಾಗೂ ರಕ್ತಸ್ರಾವದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇನ್ನು ಎಬೋಲಾ ಶಂಕಿತರ ಲಕ್ಷಣಗಳೆಂದರೆ, ಹಲ್ಲಿನ ದವಡೆಯಿಂದ ರಕ್ತಸ್ರಾವ, ಮೂಗಿನಿಂದ ರಕ್ತಸ್ರಾವ, ಕಣ್ಣು ಕೆಂಪಾಗುವುದು, – ಚರ್ಮದ ಮೇಲೆ ಕೆಂಪು ಕಲೆಗಳು, ರಕ್ತ ಮಿಶ್ರಿತ ಮಲ, ಕಪ್ಪು ಮಲ, ರಕ್ತ ವಾಂತಿ ಕಂಡುಬರುತ್ತದೆ.

ನೋಡಿರಿ

