ಬಂಡೆ ಪಟ್ಟಾಭಿಷೇಕಕ್ಕೆ ಸಜ್ಜಾಗುತ್ತಿದೆ ಗಾಜಿನಮನೆ – ಡಿಕೆಶಿ ಸಂಪುಟ ಸೇರಲು ಡಿಸಿಎಂ, ಸಚಿವಕಾಂಕ್ಷಿಗಳ ದುಂಬಾಲು!

ಬಂಡೆ ಪಟ್ಟಾಭಿಷೇಕಕ್ಕೆ ಸಜ್ಜಾಗುತ್ತಿದೆ ಗಾಜಿನಮನೆ – ಡಿಕೆಶಿ ಸಂಪುಟ ಸೇರಲು ಡಿಸಿಎಂ, ಸಚಿವಕಾಂಕ್ಷಿಗಳ ದುಂಬಾಲು!

ಕನಕಪುರದ ಬಂಡೆ, ಕಾಂಗ್ರೆಸ್ ಕಟ್ಟಾಳು, ಟ್ರಬಲ್ ಶೂಟರ್ ಅಂತೆಲ್ಲಾ ರಾಜಕಾರಣದಲ್ಲಿ ಸದ್ದು ಮಾಡುವ ಡಿ.ಕೆ ಶಿವಕುಮಾರ್ ಈಗ ಕರ್ನಾಟಕದ ಮುಖ್ಯಮಂತ್ರಿ ಗದ್ದುಗೆ ಏರಲು ಕ್ಷಣಗಣನೆ ಶುರುವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ಬಳಿಕ ನಿಯೋಜಿತ ಸಿಎಂ ಆಗಿರುವ ಡಿಕೆಶಿ ಪದಗ್ರಹಣಕ್ಕೆ ವೇದಿಕೆ ಕೂಡ ಸಿದ್ಧವಾಗುತ್ತಿದೆ. ಒಂದ್ಕಡೆ ನೂತನ ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಸಿದ್ಧತೆಗಳು ನಡೆಯುತ್ತಿದ್ರೆ ಮತ್ತೊಂದು ಕಡೆ ಸಚಿವ ಸಂಪುಟ ರಚನೆ ಕಗ್ಗಂಟಾಗಿದೆ. ಮಂತ್ರಿಗಿರಿಗಾಗಿ ಶಾಸಕರೆಲ್ಲಾ ದುಂಬಾಲು ಬಿದ್ದಿದ್ದು ಯಾರಿಗೆ ಪಟ್ಟ ಕಟ್ಟೋದು ಅನ್ನೋದೇ ತಲೆಬಿಸಿಯಾಗಿದೆ. ಮುಖ್ಯಮಂತ್ರಿ ಬದಲಾವಣೆ ಸುಲಭವಾಗಿ ನಡೆದ್ರೂ ಸಚಿವಸ್ಥಾನ ಹಂಚಿಕೆಯೇ ಬಿಸಿತುಪ್ಪುವಾಗಿದೆ.

ಇದನ್ನೂ ಓದಿ : RCB ಹೀರೋ ಟಿಮ್ ಡೇವಿಡ್‌ಗೆ ನಿಷೇಧ- ವಿಚಾರಣೆ ಬಳಿಕ ಶಿಕ್ಷೆ ನೀಡಿದ ಬಿಸಿಸಿಐ

ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ 18ನೇ ವ್ಯಕ್ತಿಯಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಒಟ್ಟು ಅಧಿಕಾರಾವಧಿಗಳ ಲೆಕ್ಕಾಚಾರದಲ್ಲಿ ಇದು ಕರ್ನಾಟಕದ 31ನೇ ಮುಖ್ಯಮಂತ್ರಿ ಅವಧಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯ ನಂತರ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆ ಡಿ. ಕೆ. ಶಿವಕುಮಾರ್ ಅವರು ಜೂನ್ 3, 2026ರಂದು ನೂತನ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದ ಗಾಜಿನಮನೆಯಲ್ಲಿ ಪದಗ್ರಹಣ ಸಮಾರಂಭ ಸಂಜೆ 4.05ಕ್ಕೆ ನೆರವೇರಲಿದ್ದು, ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ನಾಳೆಯ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಸಿನಿಮಾ ತಾರೆಯರು, ಶಾಸಕರು, ಮಾಜಿ ಸಚಿವರು ಸೇರಿ ಗಣ್ಯರು ಭಾಗಿಯಾಗಲಿದ್ದು, ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ನೀಡಲು ಸಿದ್ಧತೆ ನಡೆದಿದೆ.

ಡಿಕೆಶಿ ಪದಗ್ರಹಣ ಕಣ್ತುಂಬಿಕೊಳ್ಳಲು ಬರುವವರನ್ನ ಮೂರು ರೀತಿಯಲ್ಲಿ ವಿಂಗಡಣೆ ಮಾಡಲಾಗುತ್ತೆ.  ಪ್ರಮುಖ ನಾಯಕರ ಕುಟುಂಬಗಳು, ಬೆಂಬಲಿಗರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ. ಅತಿ ಗಣ್ಯರು, ಗಣ್ಯರು ಹಾಗೂ ಸಾಮಾನ್ಯರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಇರಲಿದ್ದು, ಮಧ್ಯಾಹ್ನ 2 ಗಂಟೆ ಒಳಗಾಗಿ ಲೋಕಭವನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ. ಯಾವುದೇ ಆಡಂಭರವಿಲ್ಲದೆ ಸರಳವಾಗಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇನ್ನು ನಾಳೆ ನಡೆಯಲಿರುವ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯನ್ನು ರಾಜ್ಯಪಾಲ ಥಾವರ್​​ಚಂದ್​​ ಗೆಹ್ಲೋಟ್ ಕೂಡ​​ ವೀಕ್ಷಿಸಿದ್ದಾರೆ.

ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಂಭಾವ್ಯರ ಕುರಿತು ನಾಯಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಹೊಸ ಸಂಪುಟದಲ್ಲಿ ತಮ್ಮ ಆಪ್ತರಿಗೆ ಸ್ಥಾನ ಕಲ್ಪಿಸಿಕೊಡಲು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಖರ್ಗೆ ಬಣಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್ ಸದಸ್ಯರಾಗಿರುವ ಯತೀಂದ್ರ ಸಿದ್ದರಾಮಯ್ಯ ಕೂಡ ಸಂಪುಟ ಸ್ಥಾನ ಸಿಗುವ ಭರವಸೆಯಲ್ಲಿದ್ದಾರೆ. ಶಿವಕುಮಾರ್ ಜತೆ ಇಬ್ಬರು ಉಪಮುಖ್ಯಮಂತ್ರಿಗಳು ಇರಬಹುದು ಎನ್ನಲಾಗುತ್ತಿದ್ದು, ಅದರಲ್ಲಿ ದಲಿತರಿಗೂ ಅವಕಾಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ. ಪರಮೇಶ್ವರ ಮತ್ತು ಪ್ರಿಯಾಂಕ್ ಖರ್ಗೆ ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಮತ್ತೊಂದು ಕಡೆ ಯತೀಂದ್ರ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಬಹುದು ಎಂದು ಹೇಳಲಾಗುತ್ತಿದೆ.

Shantha Kumari

Leave a Reply

Your email address will not be published. Required fields are marked *