ವೈಭವ್ ಹೋರಾಟ ವ್ಯರ್ಥ.. ಗಿಲ್ ಪಡೆಗೆ ಭರ್ಜರಿ ಗೆಲುವು! – ಕ್ವಾಲಿಫೈಯರ್-2 ಪಂದ್ಯದಲ್ಲಿ ಗೆದ್ದು ಫೈನಲ್ಗೆ ಎಂಟ್ರಿಕೊಟ್ಟ ಗುಜರಾತ್!

ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ದ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಗಿಲ್ ಪಡೆ ಗೆದ್ದು ಬೀಗಿದೆ. 7 ವಿಕೆಟ್ಗಳಿಂದ ಗೆದ್ದ ಗುಜರಾತ್ ಫೈನಲ್ ಟಿಕೆಟ್ ಪಡೆದುಕೊಂಡಿದ್ದು, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ ಟ್ರೋಫಿಗಾಗಿ ಸೆಣಸಲಿದೆ.
ಇದನ್ನೂ ಓದಿ:ಐಪಿಎಲ್ ಮುಗಿಯುವ ಮುನ್ನವೇ ನಾಯಕತ್ವ ತ್ಯಜಿಸಿದ ಪಂತ್ – ರಿಷಭ್ ರಾಜೀನಾಮೆ ಅಂಗೀಕರಿಸಿದ LSG
ನ್ಯೂ ಚಂಡೀಗಡದಲ್ಲಿ ನಡೆದ ಹೈವೋಲ್ಟೇಜ್ ಮ್ಯಾಚ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆರ್ಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್ ಯಶಸ್ವಿ ಜೈಸ್ವಾಲ್ ಕೇವಲ 1 ರನ್ಗೆ ಔಟಾದರು. ನಂತರ ಬಂದ ಧ್ರುವ ಜುರೇಲ್ ಕೂಡ ಕೇವಲ 7 ರನ್ ಗಳಿಸಿ ಹೊರನಡೆದರು. ಅಚ್ಚರಿ ಎಂಬಂತೆ ಮೂರನೇ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ ಬ್ಯಾಟಿಂಗ್ ಕೈಚಳಕ ತೋರಿದರು. ವೈಭವ್ ಮತ್ತು ಜಡೇಜಾ ಜೋಡಿ ಆರ್ಆರ್ ಸವಾಲಿನ ಮೊತ್ತ ಪೇರಿಸಲು ರನ್ ಕೊಡುಗೆ ನೀಡಿತು.
ಇಬ್ಬರ ಜೊತೆಯಾಟದಿಂದ ತಂಡ 65 ಬಾಲ್ಗೆ 127 ರನ್ ಕಲೆಹಾಕಿತು. ಈ ನಡುವೆ ಜಡೇಜಾ ಗಾಯದ ಸಮಸ್ಯೆಯಿಂದ ಕೆಲಹೊತ್ತು ಹೊರನಡೆಯಬೇಕಾಯಿತು. ಆಗ ಬಂದ ರಿಯಾನ್ ಪರಾಗ್ ಕೂಡ ಅಲ್ಪಮೊತ್ತಕ್ಕೆ ಪೆವಿಲಿಯನ್ ಕಡೆ ನಡೆದರು.
ನಿರೀಕ್ಷೆಯೆಂಬಂತೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೈಭವ್ 47 ಬಾಲ್ಗೆ 96 ರನ್ ಬಾರಿಸಿದರು. ಹೈದರಾಬಾದ್ ವಿರುದ್ಧ ಆದಂತೆಯೇ ಮತ್ತೊಮ್ಮೆ ಶತಕ ವಂಚಿತರಾದರು. ಮತ್ತೆ ಕ್ರೀಸ್ಗೆ ಬಂದ ಜಡೇಜಾ, ಡೊನೊವನ್ ಫೆರಾರಿಯಾ ಜೊತೆಗೂಡಿ 16 ಎಸೆತಗಳಲ್ಲೇ 42 ರನ್ ಕಲೆಹಾಕಿದರು. ಕೊನೆಯಲ್ಲಿ ಅಬ್ಬರಿಸಿದ ಡೊನೊವಲ್ 11 ಎಸೆತಕ್ಕೆ 38 ರನ್ ಸಿಡಿಸಿದರು. ಕೊನೆ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸರ್ ಸಿಡಿಸಿ ಮಿಂಚಿದರು.
215 ರನ್ಗಳ ಗುರಿಯನ್ನು ಬೆನ್ನಟ್ಟಿದ ಜಿಟಿ ನಾಯಕ ಗಿಲ್ 53 ಎಸೆತಗಳಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ 104 ರನ್ ಗಳಿಸಿದರು. ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಸಹಾಯ ಮಾಡಿದರು. ಈ ಜೋಡಿ ಮೊದಲ ವಿಕೆಟ್ಗೆ 167 ರನ್ಗಳ ಜೊತೆಯಾಟ ನೀಡಿತು. ಅಂತಿಮವಾಗಿ ರಾಜಸ್ಥಾನ್ ವಿರುದ್ಧ ಗುಜರಾತ್ 7 ವಿಕೆಟ್ಗಳ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆಯಿಟ್ಟಿತು.

ನೋಡಿರಿ

