ಶಾಲೆಯಲ್ಲಿ ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನ – ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಡಿಜಿಟಲ್ ಹಾಜರಿ ಕಡ್ಡಾಯ
ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಹೊಸ ಗೈಡ್ಲೈನ್

ಶಾಲಾ ಆರಂಭೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಮೇ 29ಕ್ಕೆ ಸ್ಕೂಲ್ ಬೆಲ್ ಹೊಡೆಯಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟವಾಗಿದೆ.
ಇದನ್ನೂ ಓದಿ:ಕರ್ನಾಟಕದ 4 ಸ್ಥಾನ ಸೇರಿ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಫಿಕ್ಸ್
ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪ್ರಕಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಡಿಜಿಟಲ್ ಹಾಜರಿ ಕಡ್ಡಾಯಗೊಳಿಸಿದೆ. ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಿದೆ. ಶಾಲಾ ಕಟ್ಟಡಗಳ ಸುರಕ್ಷತೆಗೆ ಆದ್ಯತೆ ಕೊಡಲು ಒತ್ತು ನೀಡಲಾಗಿದ್ದು, ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದುರಸ್ತಿ ಅಥವಾ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಮಳೆಗಾಲ ಆರಂಭಕ್ಕೂ ಮುನ್ನ ಶಾಲೆ ಕಟ್ಟಡದ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. 6 ರಿಂದ 14 ವರ್ಷದ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಉರ್ದು-ಇಂಗ್ಲೀಷ್ ದ್ವಿಭಾಷಾ ಮಾಧ್ಯಮವೂ ಸಹ ಈ ವರ್ಷವೇ ಆರಂಭವಾಗಬೇಕು. ದ್ವಿಭಾಷಾ ಶಿಕ್ಷಣಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಲಾಗಿದೆ.
ಮೇ 28ರೊಳಗೆ ಶಾಲೆಗಳ ಸಂಪೂರ್ಣ ಸ್ವಚ್ಛತೆ, ಕುಡಿಯುವ ನೀರು ಮತ್ತು ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಮೇ29ರಿಂದ ಶಾಲೆ ಆರಂಭವಾಗಲಿದ್ದು, ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಜೂನ್ 1 ರಂದು ಶಾಲಾ ಪ್ರಾರಂಭೋತ್ಸವವಾಗಲಿದೆ. ಆ ದಿನ ಮಕ್ಕಳಿಗೆ ಸಿಹಿಯೂಟ ನೀಡಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಬಾರಿಯ ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷದ ದಸರಾ ಹಬ್ಬಕ್ಕೆ ಸತತ 18 ದಿನಗಳ ಸುದೀರ್ಘ ರಜೆಯನ್ನು ಘೋಷಿಸಲಾಗಿದೆ. ಶೈಕ್ಷಣಿಕ ಸಾಲಿನ ಮೊದಲ ಅವಧಿಯು ಮೇ 29 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ಅಕ್ಟೋಬರ್ 3 ರಿಂದಲೇ ದಸರಾ ರಜೆಗಳು ಆರಂಭವಾಗಲಿವೆ.
ದಸರಾ ರಜೆಯ ಮುಕ್ತಾಯದ ನಂತರ, ಎರಡನೇ ಶೈಕ್ಷಣಿಕ ಅವಧಿಯು ಅಕ್ಟೋಬರ್ 22 ರಿಂದ ಪ್ರಾರಂಭವಾಗಿ ಏಪ್ರಿಲ್ 2027 ರವರೆಗೆ ಮುಂದುವರಿಯಲಿದೆ. ಏಪ್ರಿಲ್ ಕೊನೆಯಲ್ಲಿ ವಾರ್ಷಿಕ ಪರೀಕ್ಷೆಗಳೊಂದಿಗೆ ಈ ಸಾಲಿ ಶೈಕ್ಷಣಿಕ ಅವಧಿ ಮುಕ್ತಾಯಗೊಳ್ಳಲಿದೆ.

ನೋಡಿರಿ

