ಸರ್ಜರಿ ವೇಳೆ ಬಾಲಕಿಯ ಅಂಗಾಂಗ ಕದ್ದರಾ ವೈದ್ಯರು? – ಹೆತ್ತವರ ಕಣ್ಣೀರಿಗೆ ಯಾರು ಹೊಣೆ?

ನವದೆಹಲಿ: ತಾಯಿ ಜನ್ಮಕೊಟ್ಟರೆ, ವೈದ್ಯರು ಪುನರ್ ಜನ್ಮ ನೀಡುತ್ತಾರೆ ಎಂಬ ಮಾತು ಇದೆ. ಏಕೆಂದರೆ ವೈದ್ಯರು ವ್ಯಕ್ತಿ, ಧರ್ಮ, ಸಮಯ ಏನನ್ನೂ ನೋಡದೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜೀವ ಉಳಿಸುತ್ತಾರೆ. ಆದರೆ ದೆಹಲಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದ್ದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ.
ಇದನ್ನೂ ಓದಿ: ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಲ್ಲ, ಅದೊಂದು ಅಪಾಘಾತವಷ್ಟೇ’ – ಬಿಜೆಪಿ ಸಚಿವ
15 ವರ್ಷದ ಬಾಲಕಿಯೊಬ್ಬಳು ಕರುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆ ಪೋಷಕರು ದೆಹಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಈ ವೇಳೆ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದಾರೆ. ತಮ್ಮ ಮಗಳು ಆದಷ್ಟು ಬೇಗ ಹುಷಾರಾಗಲಿ ಅಂತ ಪೋಷಕರು ವೈದ್ಯರ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಲು ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪೋಷಕರು ಆಪರೇಷನ್ ಥಿಯೇಟರ್ ಬಳಿ ನಿಂತು ವೈದ್ಯರು ಆಪರೇಷನ್ ಸಕ್ಸಸ್ ಅಂತ ಹೇಳಲಿ ಎಂದು ಕಾಯುತ್ತಿರುತ್ತಾರೆ. ಆದರೆ ಪೋಷಕರಿಗೆ ಸಿಕ್ಕಿದ್ದು ಮಗಳು ಇನ್ನಿಲ್ಲ ಅನ್ನೋ ಆಘಾತದ ಸುದ್ದಿ. ನೋವಿನಲ್ಲಿಯೇ ಫೋಷಕರು ಮಗಳ ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಾರೆ. ಆಗಲೇ ಹೆತ್ತವರಿಗೆ ಏನೋ ಸರಿಯಿಲ್ಲ ಅನ್ನೋ ಅನುಮಾನ ಶುರುವಾಗುತ್ತೆ. ಶಸ್ತ್ರಚಿಕಿತ್ಸೆ ಮಾಡಿ ಮಗಳನ್ನು ಉಳಿಸಲು ಸಾಧ್ಯವಾಗದ ವೈದ್ಯರು, ಮಗಳ ಅಂಗಾಂಗವನ್ನೂ ಕೂಡಾ ತೆಗೆದಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಮಗಳ ಮೃತದೇಹವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ವಿಕೃತಿ ಮೆರೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ಬಾಲಕಿಯ ಶವಪರೀಕ್ಷೆ ನಡೆಸಲಾಗಿದೆ. ಅದರ ವರದಿ ಬಂದ ನಂತರ ಆ ಆರೋಪ ನಿಜವೋ, ಸುಳ್ಳೋ ಎಂಬುದು ಖಚಿತವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಉಪ ಆಯುಕ್ತ (ಡಿಸಿಪಿ) (ಉತ್ತರ) ಸಾಗರ್ ಸಿಂಗ್ ಕಲ್ಸಿ, ಬಾಲಕಿಯ ಕುಟುಂಬದವರು ಯಾವುದೇ ದೂರು ನೀಡದೆ ಶವವನ್ನು ಮನೆಗೆ ಕೊಂಡೊಯ್ದಿದ್ದಾರೆ. ನಂತರ ಅವರು ಪೊಲೀಸರಿಗೆ ಕರೆ ಮಾಡಿ ವೈದ್ಯರು ತಮ್ಮ ಮಗಳ ಅಂಗಾಂಗಗಳನ್ನು ತೆಗೆದಿರಬಹುದು ಎಂದು ಶಂಕಿಸಿದ್ದಾರೆ. ಮೃತ ಬಾಲಕಿಯ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಆಕೆಯ ಕುಟುಂಬದವರು ಈ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ದೂರಿನ ನಂತರ ಸ್ಥಳೀಯ ಪೊಲೀಸ್ ತಂಡವು ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಆ ಬಾಲಕಿಯ ಶವಪರೀಕ್ಷೆ ನಡೆಸಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ದೆಹಲಿ ಪೊಲೀಸರು ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.