ಮುಂಬೈ ಸೋಲಿಗೆ ಸೆಖೆಯೇ ಕಾರಣ – ಸೋತಿದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಸಮರ್ಥನೆ

ಮುಂಬೈ ಸೋಲಿಗೆ ಸೆಖೆಯೇ ಕಾರಣ – ಸೋತಿದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಸಮರ್ಥನೆ

ಮುಂಬೈ ಇಂಡಿಯನ್ಸ್​ ತಂಡದಲ್ಲಿ ಇರೋರೆಲ್ಲಾ ಸ್ಟಾರ್ ಆಟಗಾರರೇ. ಆದರೆ, ಕೊನೆಗೂ ಐಪಿಎಲ್ ಲೀಗ್‌ ಹಂತದ ಕೊನೇ ಪಂದ್ಯದಲ್ಲೂ ಕಂಡಿದ್ದು ಕೂಡಾ ಸೋಲು. ಸೋತು ಈ ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ ತಂಡದ ವಿರುದ್ಧ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಆದರೆ, ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:RRಗೆ ಲಕ್.. ಟಾಪ್-4 ಫೈನಲ್ – ಅದೃಷ್ಟದ ಆಟದಲ್ಲಿ ಸೋತ PBKS

ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 30 ರನ್​ಗಳಿಂದ ಸೋಲು ಕಂಡಿದೆ. ಅಂದರೆ ಕೊನೆಯ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಗೆಲ್ಲಲೇ ಇಲ್ಲ. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್​ಗಳಲ್ಲಿ 205 ರನ್  ಗಳಿಸಿತ್ತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 175 ರನ್​ಗಳಿಸಿ ಸುಸ್ತಾಗಿತ್ತು. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಡೆತ್ ಓವರ್‌ಗಳಲ್ಲಿ ಅತಿಯಾದ ರನ್ ಬಿಟ್ಟುಕೊಟ್ಟಿದ್ದು ಮತ್ತು ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇ ಸೋಲಿಗೆ ಮುಖ್ಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಇಷ್ಟೇ ಹೇಳಿದರೆ ಸಾಕಾಗುತ್ತಿತ್ತೋ ಏನೋ.. ಪಾಪ ಪಾಂಡ್ಯ ತಮ್ಮ ಸೋಲಿಗೆ ಮತ್ತೊಂದು ಕಾರಣ ಕೂಡಾ ನೀಡಿದ್ದಾರೆ. ನಾವು ಬೌಲಿಂಗ್ ಮಾಡುವಾಗ ಎದುರಾಳಿ ತಂಡಕ್ಕೆ ಕನಿಷ್ಠ 10 ರಿಂದ 15 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದೆವು, ಕ್ರೀಡಾಂಗಣದಲ್ಲಿ ತೀವ್ರವಾದ ಸೆಖೆಯ ವಾತಾವರಣವಿತ್ತು. ಅಂತಿಮ ಹಂತದಲ್ಲಿ ಪಂದ್ಯದ ಮೇಲಿನ ಹಿಡಿತ ಕೈತಪ್ಪಿತು ಎಂದು ಪಾಂಡ್ಯ ಹೇಳಿದ್ದಾರೆ.

ಚೇಸಿಂಗ್ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ಈ ಮೊತ್ತವನ್ನು ಖಂಡಿತವಾಗಿಯೂ ಬೆನ್ನಟ್ಟಬಹುದಾಗಿತ್ತು. ಆದರೆ ನಾವು ಪವರ್‌ಪ್ಲೇ ಅವಧಿಯಲ್ಲೇ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡೆವು. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳು ಬಿದ್ದಿದ್ದರಿಂದ, ನಂತರದ ಓವರ್‌ಗಳಲ್ಲಿ ರನ್ ವೇಗವನ್ನು ಕಾಯ್ದುಕೊಳ್ಳುವುದು ನಮಗೆ ಕೇವಲ ಕ್ಯಾಚ್-ಅಪ್ ಆಟವಾಗಿ ಮಾರ್ಪಟ್ಟಿತು ಎಂದು ಹೇಳಿದರು.  ಪಾಪ ಪಾಂಡ್ಯ ತಂಡಕ್ಕೆ ಮಾತ್ರ ವಿಪರೀತ ಸೆಖೆ ಇತ್ತು. ಈ ಕಾರಣಕ್ಕಾಗಿ ಪಂದ್ಯ ಗೆಲ್ಲಲು ಕಷ್ಟವಾಯಿತು. ಅದೇನೇ ಇರಲಿ, ಈ ಬಾರಿ ಮುಂಬೈ ಇಂಡಿಯನ್ಸ್ ಪ್ರದರ್ಶನ ಅಭಿಮಾನಿಗಳ ಪಾಲಿಗೆ ನಿರಾಶೆ ಮೂಡಿಸಿದೆ. ಆಡಿರುವ 14 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿರುವುದು ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ. ಈ ನಾಲ್ಕು ಗೆಲುವಿನೊಂದಿಗೆ ಐದು ಬಾರಿಯ ಚಾಂಪಿಯನ್ ಅಂಕ ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದೆ.

Sulekha