ಶ್ರೇಯಸ್ ಅಯ್ಯರ್ ನಾಯಕನಾಗಲು ಸಾಧ್ಯವೇ ಇಲ್ವಾ? – ಗಂಭೀರ್ ಕೋಚ್ ಆಗಿರುವ ತನಕ ಶ್ರೇಯಸ್‌ಗಿಲ್ಲ ಚಾನ್ಸ್?

ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಉತ್ತಮ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಜೊತೆಗೆ ಬಿಸಿಸಿಐ ಆಯ್ಕೆದಾರರು ಕೂಡಾ ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಬಹುದು ಅನ್ನೋ ಲೆಕ್ಕಾಚಾರ ಸಾಗ್ತಿತ್ತು. ಇದೀಗ ಶ್ರೇಯಸ್ ಅಯ್ಯರ್ ನಾಯಕನಾಗಲು ಗೌತಮ್ ಗಂಭೀರ್ ಬಿಡಲ್ಲ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಸೆಂಚುರಿ ಸಿಡಿಸಿ ಗೆದ್ದ ಸರಪಂಚ್ – ಶ್ರೇಯಸ್ ಅಯ್ಯರ್ ಶತಕ, ಪಂಜಾಬ್ ಕಿಂಗ್ಸ್ ಪ್ಲೇಆಫ್ ಆಸೆ ಜೀವಂತ
ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಆದರೆ, ಅವರ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಒಬ್ಬ ಆಟಗಾರನಾಗಿ ಸೂರ್ಯ ಫೇಲ್ ಆಗುತ್ತಿದ್ದಾರೆ. ಹೀಗಾಗಿ ಭಾರತ ಟಿ20 ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ನಾಯಕನ ರೇಸ್‌ನಲ್ಲಿ ಮುಂಚೂಣಿಯಲ್ಲಿರುವದೇ ಶ್ರೇಯಸ್ ಅಯ್ಯರ್. ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. 55.33 ರ ಸರಾಸರಿಯಲ್ಲಿ, 198.03 ರ ಸ್ಟ್ರೈಕ್ ರೇಟ್‌ನೊಂದಿಗೆ 498 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಕೇವಲ 270 ರನ್ ಗಳಿಸಿ ಫಾರ್ಮ್ಗಾಗಿ ತಡಕಾಡುತ್ತಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆಗೆ ಬಿಸಿಸಿಐ ಮುಂದಾಗಿದೆ. ಎಲ್ಲಾ ರೀತಿಯಲ್ಲೂ ನೋಡುವುದಾದರೆ, ಅಂದರೆ, ನಾಯಕತ್ವ ಮತ್ತು ಆಟಗಾರನಾಗಿ ಶ್ರೇಯಸ್ ಅಯ್ಯರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ಸಿಗಲು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಬಿಡಲು ಸಾಧ್ಯವೇ ಇಲ್ಲ ಅನ್ನೋ ಲೆಕ್ಕಾಚಾರ ಸಾಗಿದೆ.
ಕೋಚ್ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಕೋಲ್ಡ್ ವಾರ್ ಯಾಕೆ ಎಂದು ನೋಡುವುದಾದರೆ, ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಚಾಂಪಿಯನ್ ಆದಾಗ, ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ತೋರಿದ್ದರ.ು ಆದರೆ, ಅವರಿಗಿಂತ ಮೆಂಟರ್ ಆಗಿದ್ದ ಗಂಭೀರ್ ಅವರಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಕ್ರೆಡಿಟ್ ಸಿಕ್ಕಿತ್ತು. ಇದು ಶ್ರೇಯಸ್ ಅಯ್ಯರ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಕೆಆರ್ ತಂಡದಿಂದ ಶ್ರೇಯಸ್ ಅಯ್ಯರ್ ಹೊರನಡೆದಿದ್ದರು ಎಂದು ಹೇಳಲಾಗ್ತಿದೆ. ಇದಾದ ಮೇಲೂ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವಿನ ಶೀತಲ ಸಮರ ಮುಂದುವರೆದಿತ್ತು. ಗಂಭೀರ್ ಭಾರತ ತಂಡದ ಕೋಚ್ ಆದಾಗಿನಿಂದ ಶ್ರೇಯಸ್ ಟೀಮ್ ಇಂಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಶ್ರೇಯಸ್ ರನ್ ಮಳೆ ಹರಿಸಿದರೂ ಅವರನ್ನು ಟೆಸ್ಟ್ ಹಾಗೂ ಏಷ್ಯಾ ಕಪ್ ತಂಡದಿಂದ ಕೈಬಿಡಲಾಗಿತ್ತು. ಸೆಲೆಕ್ಟರ್‌ಗಳ ನಾಯಕತ್ವ ಬದಲಾವಣೆ ತೀರ್ಮಾನಕ್ಕೆ ಗಂಭೀರ್ ತಮ್ಮ ವೀಟೋ ಪವರ್ ಬಳಸಿ ಅಡ್ಡಿಪಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದೀಗ ಬಿಸಿಸಿಐ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲು ಮುಂದಾಗಿದ್ದಾರೆ. ನಾಯಕನ ಆಯ್ಕೆಗೆ ಟೀಮ್ ಇಂಡಿಯಾ ಹೆಡ್ ಕೋಚ್ ಅವರ ತೀರ್ಮಾನವೇ ಅಂತಿಮ. ಏಕೆಂದರೆ ಕಳೆದ ಬಾರಿ ಟಿ20 ತಂಡದ ನಾಯಕನ ರೇಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಗಂಭೀರ್, ಸೂರ್ಯಕುಮಾರ್ ಯಾದವ್ ಅವರನ್ನು ಕ್ಯಾಪ್ಟನ್ ಮಾಡುವಂತೆ ಪಟ್ಟು ಹಿಡಿದಿದ್ದರು. ಗೌತಮ್ ಗಂಭೀರ್ ಅವರ ಈ ನಿರ್ಧಾರವು ಫಲ ನೀಡಿತು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇದೀಗ ಇದೇ ಯಶಸ್ಸನ್ನು ಮುಂದಿಟ್ಟುಕೊಂಡು ಗೌತಮ್ ಗಂಭೀರ್ ನಾಯಕನ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ವರದಿಯಾಗಿದೆ. ಅಂದರೆ ಇಲ್ಲಿ ಗೌತಮ್ ಗಂಭೀರ್ ತಮಗೆ ಬೇಕಾದವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರಿಗೆ ಟಿ20 ತಂಡದ ನಾಯಕತ್ವ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.

ನೋಡಿರಿ

