ಸೆಂಚುರಿ ಸಿಡಿಸಿ ಗೆದ್ದ ಸರಪಂಚ್ – ಶ್ರೇಯಸ್ ಅಯ್ಯರ್ ಶತಕ, ಪಂಜಾಬ್ ಕಿಂಗ್ಸ್ ಪ್ಲೇಆಫ್ ಆಸೆ ಜೀವಂತ

ಸೆಂಚುರಿ ಸಿಡಿಸಿ ಗೆದ್ದ ಸರಪಂಚ್ – ಶ್ರೇಯಸ್ ಅಯ್ಯರ್ ಶತಕ, ಪಂಜಾಬ್ ಕಿಂಗ್ಸ್ ಪ್ಲೇಆಫ್ ಆಸೆ ಜೀವಂತ

ಪಂಜಾಬ್ ಕಿಂಗ್ಸ್ ಕೊನೆಗೂ ಸೋಲಿನ ಸರಪಳಿಯಿಂದ ಹೊರಬಂದಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ಗೆ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:RCBಗೆ ಟ್ರೋಫಿ ಡಿಫೆಂಡ್ ಚಾಲೆಂಜ್ – ಎಡವಿದ್ರೂ ಮೈಕೊಡವಿ ಎದ್ದು ನಿಲ್ತಾರಾ?

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಲಕ್ನೋ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಗೆದ್ದು ಬೀಗಿದೆ. ಪಂಜಾಬ್ ಸೋಲಿನ ಸುಳಿಯಿಂದ ಹೊರಬಂದ ಸಂಭ್ರಮದಲ್ಲಿದ್ದರೆ, ಲಕ್ನೋ ತಂಡ ಕೊನೇ ಪಂದ್ಯದಲ್ಲಿಯೂ ಸೋತು ಈ ವರ್ಷದ ಐಪಿಎಲ್‌ಗೆ ಗುಡ್‌ಬೈ ಹೇಳಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್​ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಮಿಚೆಲ್ ಮಾರ್ಷ್ ಬದಲಿಗೆ ಆರಂಭಿಕನಾಗಿ ಅವಕಾಶ ಪಡೆದಿದ್ದ ಅರ್ಶಿನ್ ಕುಲಕರ್ಣಿ ಗೋಲ್ಡನ್ ಡಕ್ ಆದರು. ನಿಕೋಲಸ್ ಪೂರನ್ 7 ಎಸೆತಗಳಲ್ಲಿ 2 ರನ್​ಗಳಿಸಿ ಮಾರ್ಕೊ ಯಾನ್ಸನ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಕೇವಲ 20 ರನ್​ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ   ಲಖನೌ ತಂಡಕ್ಕೆ ಬದೋನಿ ಹಾಗೂ ಇಂಗ್ಲಿಸ್​ 49 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಬದೋನಿ ಒಬ್ಬರೆ ಕೇವಲ 18 ಎಸೆತಗಳಲ್ಲಿ 43  ರನ್​ಗಳಿಸಿದರು.  ಇವರ ಇನ್ನಿಂಗ್ಸ್​​ನಲ್ಲಿ 5 ಬೌಂಡರಿ, 3 ಸಿಕ್ಸರ್​ಗಳಿದ್ದವು. ಬದೋನಿ ನಂತರ ಬಂದ ನಾಯಕ ರಿಷಭ್ ಪಂತ್ 4ನೇ ವಿಕೆಟ್​ಗೆ ಇಂಗ್ಲಿಸ್ ಜೊತೆಗೂಡಿ 65 ರನ್​ ಸೇರಿಸಿದರು. ಪಂತ್ ತನ್ನ ನಿಧಾನಗತಿಯ ಆಟ ಮತ್ತೆ ಮುಂದುವರೆಸಿದರು. 22 ಎಸೆತಗಳಲ್ಲಿ 26 ರನ್​ಗಳಿಸಿ ಔಟಾದರು.

197 ರನ್‌ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ಗೆ ಶ್ರೇಯಸ್ ಅಯ್ಯರ್ ಗೆಲುವಿನ ರೂವಾರಿಯಾದರು. ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. ಸ್ಫೋಟಕ ಬ್ಯಾಟರ್ ಪ್ರಿಯಾಂಶ್ ಆರ್ಯ ಶಮಿ ಬೌಲಿಂಗ್​​ನಲ್ಲಿ ಅರ್ಜುನ್ ತೆಂಡೂಲ್ಕರ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕೊನೊಲಿ 10 ಎಸೆತಗಳಲ್ಲಿ 18 ರನ್​ಗಳಿಸಿ ಔಟಾದರು. ಪಂಜಾಬ್ ತಂಡ ಕೇವಲ 22 ರನ್​ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಹಂತದಲ್ಲಿ ಪ್ರಭಸಿಮ್ರನ್ ಸಿಂಗ್ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 76 ಎಸೆತಗಳಲ್ಲಿ 140 ರನ್​ಗಳ ಬೃಹತ್ ಜೊತೆಯಾಟ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಪ್ರಭಸಿಮ್ರನ್​​​​​​ ಸಿಂಗ್ 39 ಎಸೆತಗಳಲ್ಲಿ 69 ರನ್​ಗಳಿಸಿ ಅರ್ಜುನ್ ತೆಂಡೂಲ್ಕರ್​​ಗೆ ವಿಕೆಟ್ ಒಪ್ಪಿಸಿದರು.  ಆದರೆ ಶ್ರೇಯಸ್​ ಅಯ್ಯರ್ ಕೊನೆಯವರೆಗೂ ಅಬ್ಬರಿಸಿ ಚೊಚ್ಚಲ ಶತಕ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.  ಅಯ್ಯರ್  51 ಎಸೆತಗಳಲ್ಲಿ  11 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 101 ರನ್​ಗಳಿಸಿದರು.

ಸತತ ಆರು ಸೋಲುಗಳು ಮತ್ತು ಸೋಶಿಯಲ್ ಮೀಡಿಯಾ ವಿವಾದಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅತ್ಯಂತ ಅಗತ್ಯವಿದ್ದಾಗ ತಂಡವನ್ನು ಮುನ್ನಡೆಸಿದರು. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಸಿಡಿಸಿ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿತು. ಗೆಲ್ಲಲೇಬೇಕಾದ ಈ ಪಂದ್ಯದಲ್ಲಿ ಅದ್ಭುತ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

 

Sulekha