ಅಂಗನವಾಡಿ ಕೇಂದ್ರಗಳಲ್ಲಿ ಕಲಿಕೆ ಅವಧಿ 3 ತಾಸು ಕಡಿತ – ಸರ್ಕಾರದ ಆದೇಶ
ಬೆಂಗಳೂರು: ಶಾಲಾ ಪೂರ್ವ ಶಿಕ್ಷಣ ಕಲಿಕೆ ಅವಧಿಯನ್ನು 3 ತಾಸು ಕಡಿತಗೊಳಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಮುಂದೆ ಬೇಡಿಕೆಯಿಟ್ಟಿದ್ದರು. ಇದೀಗ ಕಾರ್ಯಾಕರ್ತೆಯರ ಒತ್ತಾಯಕ್ಕೆ ಮಣಿದ ಸರ್ಕಾರ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ನೀಡುವ ಅವಧಿಯನ್ನು ಸೀಮಿತಗೊಳಿಸುವುದಾಗಿ ಸುತ್ತೋಲೆ ಹೊರಡಿಸಿದೆ.
2011ರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಶಿಕ್ಷಣ ಅವಧಿಯನ್ನು ಬೆಳಗ್ಗೆ 9.30 ರಿಂದ ಸಂಜೆ 4ಗಂಟೆವರೆಗೆ ನಡೆಸುವಂತೆ ಆದೇಶಿಸಲಾಗಿತ್ತು. ಇದೀಗ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಮೇರೆಗೆ ಶಿಕ್ಷಣ ಅವಧಿಯನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ನಡೆಸಲು ಸಮಯ ನಿಗದಿ ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಯಾರಿಗೆ ಬಂಪರ್.. ಯಾರಿಗೆ ಶಾಕ್ – ಕೇಂದ್ರ ಬಜೆಟ್ ಸುತ್ತ ಅದೆಷ್ಟು ‘ಲೆಕ್ಕಾಚಾರ’!?
ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ನೀಡುವ ವೇಳೆ ಪೋಷಕರು, ಸಾರ್ವಜನಿಕರು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಂತೆ ಭೇಟಿ ನೀಡಬೇಕು. ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಫಲಾನುಭವಿಗಳು ಮತ್ತು ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಯ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾದರೆ ಅಥವಾ ಚರ್ಚೆ ನಡೆಸಬೇಕಾದರೆ ಮಧ್ಯಾಹ್ನ 2 ಗಂಟೆಯ ನಂತರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕು. ಈ ಸೂಚನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಲಾಗಿದೆ.
ಇನ್ನು ಮಿನಿ ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಕಾರ್ಯಕರ್ತೆಯರನ್ನಾಗಿ ಬಡ್ತಿ ನೀಡುವ ವಿಚಾರದಲ್ಲಿ ಮಾಡಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ. ಈ ಮೊದಲು ಇದ್ದ ನಿಯಮವನ್ನೇ ಅನುಸರಿಸಬೇಕೆಂದು ಇಲಾಖೆ ತಿಳಿಸಿದೆ.