ಮಳೆ ಬಂದ್ರೂ ಕೂಡಾ RCBಗೇನೇ ನಂಬರ್ 1 ಸ್ಥಾನ – 6000 ರನ್‌ಗಳ ಸರದಾರ ಶುಭಮನ್ ಗಿಲ್

ಮಳೆ ಬಂದ್ರೂ ಕೂಡಾ RCBಗೇನೇ ನಂಬರ್ 1 ಸ್ಥಾನ – 6000 ರನ್‌ಗಳ ಸರದಾರ ಶುಭಮನ್ ಗಿಲ್

ಐಪಿಎಲ್ ಟೂರ್ನಿಯಲ್ಲಿ ಹತ್ತು ಹಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ. ಐಪಿಎಲ್ ಅಂಗಳದ ರೋಚಕ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.

ಇದನ್ನೂ ಓದಿ:ಗಂಟು ಮೂಟೆ ಕಟ್ಟಿದ CSK – ರುತುರಾಜ್ ನಾಯಕನಾಗಿದ್ದೇ ತಪ್ಪಾ?

ಪ್ಲೇಆಫ್‌ ರೇಸ್‌ಗೆ ಎಂಟ್ರಿ ಕೊಡುವ ಅವಕಾಶ ಮಿಸ್ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಗಂಟು ಮೂಟೆ ಕಟ್ಟಿದೆ. ಧೋನಿ ಇಲ್ಲದಿರುವುದು ತಂಡದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ರುತುರಾಜ್ ಗಾಯಕ್ವಾಡ್ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ  ಗಾಯಕ್ವಾಡ್, ಕ್ರೀಸ್‌ನಲ್ಲಿ ಧೋನಿ ಸೃಷ್ಟಿಸುತ್ತಿದ್ದ ಇಂಪ್ಯಾಕ್ಟ್ ಈ ಸೀಸನ್‌ನಲ್ಲಿ ತಂಡಕ್ಕೆ ಸಿಗಲಿಲ್ಲ. ಕೊನೆಯ ಓವರ್‌ಗಳಲ್ಲಿ ಎದುರಾಳಿಗಳಲ್ಲಿ ಭಯ ಹುಟ್ಟಿಸಿ, ಒಬ್ಬರೇ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದರು. ಈ ಸೀಸನ್‌ನಲ್ಲಿ ನಾವು ಅವರನ್ನು ಬಹಳ ಮಿಸ್ ಮಾಡಿಕೊಂಡಿದ್ದೇವೆ. ಮುಂದಿನ ಸೀಸನ್‌ನಲ್ಲಿ ಏನಾಗುತ್ತೆ ಅಂತ ಊಹಿಸಲು ಸಾಧ್ಯವಿಲ್ಲ ಎಂದು ರುತುರಾಜ್ ಹೇಳಿದ್ದಾರೆ.

19ನೇ ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ಸಿಎಸ್‌ಕೆ ಅಭಿಯಾನ ಆರಂಭವಾಗಿತ್ತು. ಇದೀಗ ಹ್ಯಾಟ್ರಿಕ್ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ. ಐಪಿಎಲ್‌ನಲ್ಲಿ ದೊಡ್ಡ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಸಿಎಸ್‌ಕೆ, 14 ಪಂದ್ಯಗಳಲ್ಲಿ 6 ಗೆಲುವು ಮತ್ತು 8 ಸೋಲುಗಳನ್ನು ಕಾಣುವ ಮೂಲಕ ಏಳನೇ ಸ್ಥಾನದೊಂದಿಗೆ ಟೂರ್ನಿಗೆ ಗುಡ್‌ ಬೈ ಹೇಳಿದೆ..

ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗಿಲ್ 3 64 ರನ್ ಗಳಿಸಿದ್ರು. ಇದರಿಂದಾಗಿ ಟಿ20 ಸ್ವರೂಪದಲ್ಲಿ 6000 ರನ್‌ಗಳ ಗಡಿಯನ್ನು ದಾಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 6000 ರನ್‌ಗಳನ್ನು ಗಳಿಸಿದವರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ. ಜೊತೆಗೆ ಭಾರತೀಯ ಆಟಗಾರರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದರೆ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸುದರ್ಶನ್ 84 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಇದು ಸುದರ್ಶನ್ ಅವರ ಸತತ ಐದನೇ ಅರ್ಧಶತಕ, ಈ ಮೂಲಕ ಅವರು ಐಪಿಎಲ್‌ನಲ್ಲಿ ಏಳು ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸುದರ್ಶನ್​ಗೂ ಮೊದಲು, 2012 ರ ಐಪಿಎಲ್​ನಲ್ಲಿ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದರು. ಅವರ ನಂತರ, ಜೋಸ್ ಬಟ್ಲರ್ 2018 ರಲ್ಲಿ ಈ ಸಾಧನೆ ಮಾಡಿದರೆ, ಡೇವಿಡ್ ವಾರ್ನರ್ 2019 ರಲ್ಲಿ ಈ ಸಾಧನೆ ಮಾಡಿದ್ದರು. ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸುದರ್ಶನ್, ಈ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 638 ರನ್ ಗಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ 18 ವರ್ಷಗಳಷ್ಟು ಹಳೇ ಸಂಪ್ರದಾಯವನ್ನು ಮುರಿದಿದೆ. ಐಪಿಎಲ್ ಇತಿಹಾಸದಲ್ಲಿ ಎಂಎಸ್ ಧೋನಿ ಇಡೀ ಆವೃತ್ತಿಯಲ್ಲಿ ಒಂದೇ ಒಂದು ಲೀಗ್ ಪಂದ್ಯವನ್ನು ಆಡದೆ ಮೈದಾನದಿಂದ ಹೊರಗುಳಿದಿರುವುದು ಇದೇ ಮೊದಲು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಎಸ್ ಧೋನಿ. ಇದಕ್ಕೂ ಮೊದಲು, ಅವರು ಪ್ರತಿ ಆವೃತ್ತಿಯಲ್ಲಿ ಕನಿಷ್ಠ 10 ಪಂದ್ಯಗಳನ್ನು ಆಡಿದ್ದರು. ಈ ಬಾರಿ ಮಾತ್ರ ಒಂದೂ ಪಂದ್ಯವನ್ನಾಡದೆ ಲೀಗ್ ಹಂತ ಮುಗಿಸಿದ್ದು ಇದೇ ಮೊದಲು. ಈ ಮೂಲಕ 19 ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಕೊನೆಗೂ ಅಂತ್ಯವಾಗಿದೆ.

ಲೀಗ್ ಹಂತದಲ್ಲಿ ಕೊನೆ ಪಂದ್ಯಕ್ಕೆ ಆರ್‌ಸಿಬಿ ರೆಡಿಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ನನ್ನ ಮಣಿಸೋಕೆ  ಚಾಲೆಂಜರ್ಸ್ ಬೆಂಗಳೂರು ತಂಡ ರಣ ಹದ್ದಿನಂತೆ ಕಾಯುತ್ತಿದೆ. ಟೆಬಲ್ ಟಾಪ್‌ನಲ್ಲಿರೋ ಆರ್‌ಸಿಬಿ ಇದ್ದು, ಆ ಸ್ಥಾನ ಉಳಿಸಿಕೊಳ್ಳಬೇಕಾದ್ರೆ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ.  ಎರಡೂ ತಂಡಗಳು ಈಗಾಗಲೇ ಪ್ಲೇಆಫ್‌ಗೆ ತಲುಪಿವೆ ಆದರೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ.

SRH ಮತ್ತು RCB ನಡುವಿನ ಮಹತ್ವದ ಪಂದ್ಯಕ್ಕೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪಂದ್ಯದ ಸಮಯದಲ್ಲಿ ಶೇ.45 ರಷ್ಟು ಮಳೆಯ ಭೀತಿ ಎದುರಾಗಿದೆ. ಹೈದರಾಬಾದ್‌ನ ಕೆಲ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ. ಮಳೆ ಬಂದರೆ ಆರ್‌ಸಿಬಿಗೆ ಲಾಭವಾಗಲಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೂ ಆರ್‌ಸಿಬಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. 18 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಆರ್‌ಸಿಬಿಗೆ ಪಂದ್ಯ ರದ್ದಾದರೆ ಒಂದು ಅಂಕ ಸಿಗಲಿದೆ. ಇದರಿಂದಾಗಿ ಆರ್‌ಸಿಬಿ ಅಗ್ರಸ್ಥಾನದಲ್ಲೇ ಉಳಿಯಲಿದೆ. ಜತೆಗೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯಲಿದೆ.

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ರಜತ್ ಪಾಟೀದಾರ್ ತಂಡವನ್ನು ಸೇರಿಕೊಂಡಿದ್ದಾರೆ. ಗಾಯದ ಕಾರಣದಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ಕಳೆದ ಮ್ಯಾಚ್‌ನಲ್ಲಿ ಪಾಟಿದಾರ್ ಜಾಗದಲ್ಲಿ ಆಡಿದ್ದ ವೆಂಕಟೇಶ್ ಅಯ್ಯರ್ ಅತಿ ಹೆಚ್ಚು ಸ್ಕೋರ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈಗ ಪಾಟಿದಾರ್ ಬಂದಿರುವುದರಿಂದ ಫಾರ್ಮ್‌ನಲ್ಲಿರುವ ಅಯ್ಯರ್ ಅವರನ್ನು ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಲು ಬಡ್ತಿ ನೀಡುತ್ತಾರಾ, ಇಲ್ಲವೇ 7ನೇ ಸ್ಥಾನದಲ್ಲಿ ಆಡಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಕ್ರೀಡಾ ಸ್ಫೂರ್ತಿ ಮರೆತಿದ್ದಕ್ಕಾಗಿ ಬಿಸಿಸಿಐ ದಂಡದ ಬರೆ ಎಳೆದಿದೆ. KKR ತಂಡದ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ತಮ್ಮ ರನ್-ಅಪ್‌ಗೆ ಹಿಂತಿರುಗುವಾಗ, ಹಾರ್ದಿಕ್ ಪಾಂಡ್ಯ ಹತಾಶೆಯಿಂದಾಗಿ ನಾನ್ ಸ್ಟ್ರೈಕ್​ ವಿಕೆಟ್​ನ ಬೇಲ್ಸ್‌ಗಳನ್ನು ನೆಲಕ್ಕೆ ಉರುಳಿಸಿದರು. ಇದು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಪಂದ್ಯ ಶುಲ್ಕ ಶೇ. 10 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ. ಇದರ ಜೊತೆಗೆ 1 ಡಿಮೆರಿಟ್ ಅಂಕವನ್ನು ಸಹ ನೀಡಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಶೀಘ್ರದಲ್ಲೇ ಹಸೆಮಣೆಯೇರಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಂಬಂಧಿ, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಕಾವ್ಯ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

Sulekha