ಇಬೋಲಾ ವೈರಸ್ ಅಟ್ಟಹಾಸಕ್ಕೆ ಜಗತ್ತು ಶೇಕ್ – ಭಾರತದಲ್ಲಿ ಹೈ ಅಲರ್ಟ್

ಇಬೋಲಾ ವೈರಸ್ ಅಟ್ಟಹಾಸಕ್ಕೆ ಜಗತ್ತು ಶೇಕ್ – ಭಾರತದಲ್ಲಿ ಹೈ ಅಲರ್ಟ್

ಆಫ್ರಿಕಾ ಖಂಡದ ಕಾಂಗೋ ಮತ್ತು ಉಗಾಂಡಾದಲ್ಲಿ ಮಾರಣಾಂತಿಕ ‘ಬುಂಡಿಬುಗ್ಯೊ’ ಎಬೋಲಾ ವೈರಸ್ ತಳಿ ವೇಗವಾಗಿ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಹೈ-ಅಲರ್ಟ್ ಘೋಷಿಸಿದೆ. ಇದೇ ವೇಳೆ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಬೋಲಾ ತಡೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವಂತೆ ಮತ್ತು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ 4 ಸ್ಥಾನ ಸೇರಿ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಫಿಕ್ಸ್

ಸಭೆಯಲ್ಲಿ ದೇಶದಾದ್ಯಂತ ಇಬೋಲಾ ನಿಗಾ ಕ್ರಮಗಳನ್ನು ಬಲಪಡಿಸಲು ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದ್ದು, ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಕಟ್ಟುನಿಟ್ಟಿನ ಸ್ಕ್ರೀನಿಂಗ್, ಅಗತ್ಯಬಿದ್ದರೆ ಕ್ವಾರಂಟೈನ್ ವ್ಯವಸ್ಥೆ, ರೋಗಿಗಳ ತುರ್ತು ನಿರ್ವಹಣೆ, ರೆಫರಲ್ ಪ್ರಕ್ರಿಯೆ ಮತ್ತು ಪ್ರಯೋಗಾಲಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚನೆ ನೀಡಿದ್ದಾರೆ.

ಎಲ್ಲಾ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳು ಆರೋಗ್ಯ ಸಚಿವಾಲಯದೊಂದಿಗೆ ನಿರಂತರ ಸಮನ್ವಯ ಸಾಧಿಸಿ ಮುನ್ನೆಚ್ಚರಿಕೆ ವಹಿಸುತ್ತಿವೆ ಎಂದು ಸೂಚನೆ ನೀಡಿದ್ದಾರೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್‌ನಂತಹ ಹೈ-ರಿಸ್ಕ್ (ಹೆಚ್ಚಿನ ಅಪಾಯವಿರುವ) ದೇಶಗಳಿಂದ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸಿ ಬರುವ ಪ್ರಯಾಣಿಕರು, ಇಮಿಗ್ರೇಷನ್ ಕ್ಲಿಯರೆನ್ಸ್‌ಗೂ ಮುನ್ನ ವಿಮಾನ ನಿಲ್ದಾಣದ ಹೆಲ್ತ್ ಡೆಸ್ಕ್ ಅಥವಾ ಹೆಲ್ತ್ ಆಫೀಸರ್‌ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.

ಆಫ್ರಿಕಾ ಪ್ರವಾಸ ಮುಗಿಸಿ ಬಂದ 21 ದಿನಗಳ ಒಳಗಾಗಿ (ವೈರಸ್‌ನ ಇನ್‌ಕ್ಯುಬೇಷನ್ ಅವಧಿ) ಜ್ವರ ಅಥವಾ ಇತರೆ ಯಾವುದೇ ಲಕ್ಷಣಗಳು ಕಂಡುಬಂದರೆ, ಪ್ರಯಾಣಿಕರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ತಮ್ಮ ಪ್ರಯಾಣದ ಇತಿಹಾಸವನ್ನುಕಡ್ಡಾಯವಾಗಿ ಬಹಿರಂಗಪಡಿಸಬೇಕು.

ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ ಅಂತಹ ಪ್ರಯಾಣಿಕರು ಇಮಿಗ್ರೇಷನ್ ಪ್ರಕ್ರಿಯೆಗಿಂತ ಮುಂಚಿತವಾಗಿಯೇ ಆರೋಗ್ಯ ಅಧಿಕಾರಿಗಳಿಗೆ ಸ್ವಯಂಪ್ರೇರಿತರಾಗಿ ವರದಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

Kishor KV

Leave a Reply

Your email address will not be published. Required fields are marked *