ದುಬಾರೆ ದುರಂತ ಎಫೆಕ್ಟ್ – ಪನ್ಸೋಲಿ, ಸಕ್ರೆಬೈಲ್ ಆನೆ ಬಿಡಾರಕ್ಕೆ ನೋ ಎಂಟ್ರಿ

ದುಬಾರೆ ದುರಂತ ಎಫೆಕ್ಟ್ – ಪನ್ಸೋಲಿ, ಸಕ್ರೆಬೈಲ್ ಆನೆ ಬಿಡಾರಕ್ಕೆ ನೋ ಎಂಟ್ರಿ

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಮೇ 18ರಂದು ನಡೆದಿದ್ದ ಘೋರ ದುರಂತದಲ್ಲಿ ಮಹಿಳೆ ಬಲಿಯಾದ ಬೆನ್ನಲ್ಲೇ   ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರದಲ್ಲಿ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.   ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ಆನೆ ವೀಕ್ಷಣೆಗೆ ನಿರ್ಬಂಧ ಹೇರಿ ಅರಣ್ಯ ಇಲಾಖೆ  ಆದೇಶ ಹೊರಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿ ಒಟ್ಟು ಐದು ಆನೆಗಳಿವೆ. ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಆನೆ ವೀಕ್ಷಣೆಗೆ ಅವಕಾಶವಿತ್ತು. ಆನೆ ಚಿಕಿತ್ಸಾ ಕೇಂದ್ರ ಮತ್ತು ತರಬೇತಿ ಕೇಂದ್ರವಾಗಿ ಅರಣ್ಯ ಇಲಾಖೆ ಮಾರ್ಪಡಿಸಿದೆ. ದುಬಾರೆ ಆನೆ ಬಿಡಾರದಲ್ಲಿ ದುರ್ಘಟನೆ ಬೆನ್ನಲ್ಲೇ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಕ್ರೆಬೈಲು ಬಿಡಾರವನ್ನುತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆರಂಭದಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸ್ನಾನ ಹಾಗೂ ಮೈ ಮುಟ್ಟುವುದನ್ನು ಮಾತ್ರ ನಿಷೇಧಿಸಲಾಗಿತ್ತು. ಪ್ರವಾಸಿಗರಿಗೆ ದೂರದಿಂದ ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಆದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಇದೀಗ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೊಸ ಎಸ್‌ಒಪಿ ನಿಯಮಗಳು ಜಾರಿಗೆ ಬರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬಾರೆಯಲ್ಲಿ ಆಗಿದ್ದೇನು?

ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ನೂರಾರು ಪ್ರವಾಸಿಗರ ಎದುರಲ್ಲೇ ಮೇ 18ರಂದು ಘೋರ ದುರಂತ ನಡೆದು ಹೋಗಿತ್ತು. ಮದವೇರಿ ಬಂದಿದ್ದ ಕಂಜನ್ ಆನೆ ನೇರವಾಗಿ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿತ್ತು. ತಕ್ಷಣ ಮಾರ್ತಾಂಡ ಪ್ರವಾಸಿಗರ ಮೇಲೆಯೇ ಉರುಳಿ ಬಿದ್ದಿತ್ತು. ಆನೆ ಅಡಿ ಸಿಲುಕಿ ಚೆನ್ನೈ ಮೂಲದ ತುಳಸಿ ಅಲ್ಲೇ ಪ್ರಾಣ ಬಿಟ್ಟರೆ, ಪತಿ ಜೋಯೆಲ್‌ ಹಾಗೂ ಪುತ್ರಿ ಬಚಾವ್ ಆಗಿದ್ದರು.

Kishor KV

Leave a Reply

Your email address will not be published. Required fields are marked *