ಸರ್ಕಾರಿ ಹಳೇ ವಾಹನಗಳಿಗೆ ಏ.1ರಿಂದ ಗೇಟ್​ಪಾಸ್ – ಅದೆಷ್ಟು ಲಕ್ಷ ವಾಹನಗಳು ಗುಜರಿಪಾಲು..!?

ಸರ್ಕಾರಿ ಹಳೇ ವಾಹನಗಳಿಗೆ ಏ.1ರಿಂದ ಗೇಟ್​ಪಾಸ್ – ಅದೆಷ್ಟು ಲಕ್ಷ ವಾಹನಗಳು ಗುಜರಿಪಾಲು..!?

15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳಿಗೆ ಗೇಟ್​ಪಾಸ್ ನೀಡಲು ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರಿಗೆ ನಿಗಮಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಒಡೆತನದ 9 ಲಕ್ಷಕ್ಕೂ ಹೆಚ್ಚು ವಾಹನಗಳು ಇದೇ ಏಪ್ರಿಲ್ 1 ರಿಂದ ರಸ್ತೆಗೆ ಇಳಿಸುವಂತಿಲ್ಲ. 9 ಲಕ್ಷಕ್ಕೂ ಹೆಚ್ಚು ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮೋದನೆ ನೀಡಿದ್ದು, ಮಾಲಿನ್ಯಕಾರಕವಲ್ಲದ ಬಸ್‌ಗಳು ಮತ್ತು ಕಾರುಗಳು ರಸ್ತೆಗಿಳಿಯುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಹೋದರನಿಗೆ ಜನಾರ್ದನ ರೆಡ್ಡಿ ಸವಾಲ್ – ಬಳ್ಳಾರಿ ಕ್ಷೇತ್ರಕ್ಕೆ ಗಣಿಧಣಿ ಪತ್ನಿಯೇ ಅಭ್ಯರ್ಥಿ..!

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಏಪ್ರಿಲ್ 1 ರಿಂದ, 15 ವರ್ಷಕ್ಕಿಂತ ಹಳೆಯದಾದ ಸಾರಿಗೆ ನಿಗಮಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಒಡೆತನದ ಬಸ್‌ಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಡೆತನದ ಎಲ್ಲಾ ವಾಹನಗಳನ್ನು ನೋಂದಣಿ ರದ್ದುಗೊಳಿಸಲಾಗುತ್ತದೆ. ದೇಶದ ರಕ್ಷಣೆಗಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ನಿರ್ವಹಣೆಗಾಗಿ ಕಾರ್ಯಾಚರಣೆ ಉದ್ದೇಶಗಳಿಗಾಗಿ ಬಳಸುವ ವಿಶೇಷ ಉದ್ದೇಶದ ವಾಹನಗಳಿಗೆ ನಿಯಮ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹೊಸ ನಿಯಮದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ 9 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿಯುವಂತಿಲ್ಲ. ಇದ್ರಲ್ಲೂ ಕೇವಲ ಕರ್ನಾಟಕದಲ್ಲೇ 40 ರಿಂದ 50 ಸಾವಿರಕ್ಕೂ ಹೆಚ್ಚು ಸರ್ಕಾರಿ ವಾಹನಗಳಿವೆ. ಇನ್ನು ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ಉಂಟು ಮಾಡದಂತಹ ವಾಹನಗಳನ್ನು ಅಂದರೆ ಎಲೆಕ್ಟ್ರಿಕ್​ ಮಾದರಿಯ ವಾಹನಗಳನ್ನು ಖರೀದಿಸುವಂತೆ ಸಲಹೆ ನೀಡಲಾಗಿದೆ.

ಯಾವ ವಾಹನಗಳಿಗೆ ವಿನಾಯಿತಿ ಇದೆ ಅನ್ನೋದನ್ನ ನೋಡೋದಾದ್ರೆ ಕಾನೂನು ಮತ್ತು ಸಮಾಜ ರಕ್ಷಣೆಗಾಗಿ ತಯಾರಿಯಾದ ವಾಹನಗಳಿಗೆ ಈ ನಿಯಮ ಸಂಬಂಧ ಪಡುವುದಿಲ್ಲ. ವಿಶೇಷ ಉದ್ದೇಶವನ್ನಿಟ್ಟುಕೊಂಡು ರೂಪಿಸಲಾದ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ದೇಶ ಅಥವಾ ರಾಜ್ಯದ ಭದ್ರತೆಗಾಗಿ ತಯಾರಿಯಾದ ವಾಹನಗಳಿಗೆ ಹಾಗೂ ರಕ್ಷಣಾ ಇಲಾಖೆ ಕಾರ್ಯಾಚರಣೆಯ ಶಸ್ತ್ರಸಜ್ಜಿತ ವಾಹನಗಳಿಗೆ ಇದು ಸಂಬಂಧ ಪಡುವುದಿಲ್ಲ.

 

 

suddiyaana