ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ರಿಲೀಫ್! – ಸದ್ಯಕ್ಕಿಲ್ಲ ಟಿಕೆಟ್ ದರ ಹೆಚ್ಚಳ!

ಬೆಲೆ ಏರಿಕೆಯಿಂದಾಗಿ ಸಿಲಿಕಾನ್ ಸಿಟಿ ಮಂದಿ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತುಗಳ ಜೊತೆಗೆ ಕ್ಯಾಬ್, ಬಸ್ ಬೆಲೆ ಕೂಡ ಏರಿಕೆ ಕಂಡಿದೆ. ಇತ್ತೀಚೆಗೆ ನಮ್ಮ ಮೆಟ್ರೋ ಬೆಲೆ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗಿತ್ತು. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಸದ್ಯಕ್ಕೆ ಮೆಟ್ರೋ ಟಿಕೆಟ್ ದರ ಏರಿಕೆ ಇಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದುಬಾರೆ ದುರಂತಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ! – 2019ರಲ್ಲೇ ಎಚ್ಚರಿಕೆ ನೀಡಿದ್ದ ತಜ್ಞರ ಸಮಿತಿ!
ನಮ್ಮ ಮೆಟ್ರೋದಲ್ಲಿ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಕಳೆದ ಫೆ.9ರಿಂದ ಅನ್ವಯ ಆಗುವಂತೆ 5 ರೂ. ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ದರ ಏರಿಕೆ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಸರ್ಕಾರ, ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು. ಆದ್ರೀಗ ದರ ಏರಿಕೆ ಮಾಡಲು ಮುಂದಾಗಿದ್ದ ಬಿಎಂಆರ್‌ಸಿಎಲ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಏ.23ರಂದು ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಬಿಎಂಆರ್‌ಸಿಎಲ್ ದರ ಏರಿಕೆಗೆ ಪ್ರಸ್ತಾಪ ಇಟ್ಟಿತ್ತು. ಆ ಸಭೆಯಲ್ಲಿ ದರ ಏರಿಕೆ ಬೇಡ ಅಂತ ನಿರ್ಧಾರ ಆಗಿತ್ತು. ಬಳಿಕ ಮತ್ತೆ ದರ ಏರಿಕೆ ವಿಚಾರ ಮುನ್ನಲೆಗೆ ಬಂದ ಬೆನ್ನಲ್ಲೇ ದರ ಏರಿಕೆ ಸದ್ಯಕ್ಕೆ ಬೇಡ ಅನ್ನೋ ನಿರ್ಣಯಕ್ಕೆ ಬೋರ್ಡ್ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದ ಬೋರ್ಡ್ ಸಭೆಯಲ್ಲಿ ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಸ್ತಾಪ ಮಂಡಿಸಿತ್ತು. ಆದರೆ ಸದ್ಯಕ್ಕೆ ದರ ಏರಿಕೆ ಬೇಡ ಮುಂದಿನ ಬೋರ್ಡ್ ಮೀಟಿಂಗ್‌ನಲ್ಲಿ ಈ ವಿಚಾರದ ಬಗ್ಗೆ ಮತ್ತೆ ಚರ್ಚೆ ನಡೆಸೋಣ ಎಂದು ಸೂಚನೆ ನೀಡಲಾಗಿದೆ. ಹೀಗಾಗಿ ಸದ್ಯಕ್ಕೆ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ಇಲ್ಲದಿರೋದು ಕೊಂಚ ನಿರಾಳ ತಂದಿದೆ.

ನೋಡಿರಿ

