A ಅಂದ್ರೆ ಆರತಿ ಸೂರ್ಯವಂಶಿ ಅಮ್ಮನ ಹೆಸರು – ವೈಭವ್ ಸ್ಪೆಷಲ್ ಸೆಲೆಬ್ರೇಷನ್ ಸೀಕ್ರೆಟ್ ರಿವೀಲ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ತಮ್ಮೆಲ್ಲಾ ಕೌಶಲ್ಯ ಉಪಯೋಗಿಸಿದರೂ 15ರ ಪೋರ ಜಗ್ಗಲಿಲ್ಲ.. ಹೊಡಿ..ಬಡಿ.. ಬೌಲರ್‌ಗಳನ್ನು ದಂಡಿಸು.. ಇದೇ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಸ್ಟೈಲ್.. ಇನ್ನು ಅರ್ಧಶತಕ ಸಿಡಿಸಿದ ಮೇಲೆ ಸ್ಪೆಷಲ್ ಸೆಲೆಬ್ರೇಷನ್.. ಅದರ ಅರ್ಥ ಏನು ಎಂದು ಮೈದಾನದಲ್ಲಿ ಕೇಳಿದರೆ ಹೇಳದ ವೈಭವ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ:ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಲಕ್ನೋ ಧೂಳಿಪಟ – ರಾಯಲ್ಸ್ ಪ್ಲೇಆಫ್ ಎಂಟ್ರಿ ಫಿಕ್ಸ್?
ಟಿ20 ಕ್ರಿಕೆಟ್ ಅಂದರೆ ಅಬ್ಬರ.. ರನ್‌ಗಳ ಸುರಿಮಳೆ ಅನ್ನೋದನ್ನ ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ 15 ವರ್ಷದ ಹರೆಯದ ವೈಭವ್ ಸೂರ್ಯವಂಶಿ. ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 221 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ರಾಜಸ್ಥಾನ್ ರಾಯಲ್ಸ್ ಒತ್ತಡಕ್ಕೆ ಸಿಲುಕಬಹುದು ಎಂಬ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದಾನೆ ಬಾಸ್ ಬೇಬಿ. ಅದು ಕೂಡ ಕೇವಲ 38 ಎಸೆತಗಳಲ್ಲಿ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 93 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಸೀಸನ್‌ನ 13 ಇನ್ನಿಂಗ್ಸ್‌ಗಳಿಂದ ಒಟ್ಟು 579 ರನ್ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಸದ್ಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಇನ್ನು ಅರ್ಧಶತಕದ ಬಳಿಕ ಅವರು ಮಾಡಿದ ವಿಶಿಷ್ಟ ಕೈ ಸನ್ನೆಯ ಆಚರಣೆಯ ಬಗ್ಗೆ ಕೇಳಿದಾಗ, “ಅದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಹೊಸದನ್ನು ಪ್ರಯತ್ನಿಸುತ್ತೇನೆ, ಅಷ್ಟೇ,” ಎಂದು ನಗುತ್ತಾ ಉತ್ತರಿಸಿದ್ದರು. ಆ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಅದು ತಾಯಿಯ ಹೆಸರಿನ ಮೊದಲಾಕ್ಷ (A- ಆರತಿ) ತೋರಿಸಿದ ಸಂಭ್ರಮವಾಗಿತ್ತು ಎಂದು ತಿಳಿಸಿದ್ದಾರೆ.
ನಮ್ಮ ತಂಡದ ಗಮನ ಈಗ ಮುಂದಿನ ಪಂದ್ಯದ ಮೇಲಿದೆ. ಯಾವುದೇ ಒತ್ತಡವಿಲ್ಲದೆ, ಟೂರ್ನಿ ಆರಂಭದಿಂದ ಆಡಿದಂತೆಯೇ ಆಟವನ್ನು ಆನಂದಿಸುತ್ತಾ ಕ್ರಿಕೆಟ್ ಆಡುವುದು ಮತ್ತು ಪಂದ್ಯಗಳನ್ನು ಗೆಲ್ಲುವುದಷ್ಟೇ ನಮ್ಮ ಮುಂದಿರುವ ಗುರಿ ಎಂದು ಹೇಳುವ ಮೂಲಕ ವೈಭವ್ ಸೂರ್ಯವಂಶಿ ಮುಂದಿನ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 15ರ ಹರೆಯದ ವೈಭವ್ ಸೂರ್ಯವಂಶಿ ಅವರ ಈ ಆಟ ಮತ್ತು ಅವರ ಮಾತುಗಳು ಕ್ರಿಕೆಟ್‌ಗೆ ಒಬ್ಬ ಜವಾಬ್ದಾರಿಯುತ ಮತ್ತು ಅಪಾರ ಮಾನಸಿಕ ಪ್ರಬುದ್ಧತೆಯುಳ್ಳ ಆಟಗಾರ ಸಿಕ್ಕಿದ್ದಾನೆ ಎಂಬುದನ್ನು ತೋರಿಸುತ್ತದೆ.

ನೋಡಿರಿ

