ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಲಕ್ನೋ ಧೂಳಿಪಟ – ರಾಯಲ್ಸ್ ಪ್ಲೇಆಫ್ ಎಂಟ್ರಿ ಫಿಕ್ಸ್?

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಲಕ್ನೋ ಧೂಳಿಪಟ – ರಾಯಲ್ಸ್ ಪ್ಲೇಆಫ್ ಎಂಟ್ರಿ ಫಿಕ್ಸ್?

ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ ಕನಸು ಮತ್ತೆ ಚಿಗುರಿದೆ. ಲಕ್ನೋ ತಂಡವನ್ನು ಸೋಲಿಸಿದ ರಾಯಲ್ಸ್ ತಂಡ ಪ್ಲೇಆಫ್ ಹತ್ತಿರಕ್ಕೆ ಬಂದಿದೆ. ಬಹುತೇಕ ಪ್ಲೇಆಫ್ ಎಂಟ್ರಿ ಫಿಕ್ಸ್ ಅಂತಾನೇ ಹೇಳಬಹುದು. ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ಸೂರ್ಯವಂಶಿ ಗೆಲುವಿನ ರೂವಾರಿಯಾದರು.

ಇದನ್ನೂ ಓದಿ:RCB, GT & SRHಗೆ ಸಿಕ್ಕಾಯ್ತು ಕ್ವಾಲಿಫೈ ಟಿಕೆಟ್ – 4ನೇ ಸ್ಥಾನಕ್ಕಾಗಿ 5 ಟೀಂ ಫೈಟ್

ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ IPLನ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್  ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲ್​​ಎಸ್​​ಜಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್​ ಕಳೆದುಕೊಂಡು 220 ರನ್ ಗಳಿಸಿತ್ತು. ಲಕ್ನೋ ಪರ ಮಿಚೆಲ್ ಮಾರ್ಷ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮಾಡಿದರು. 57 ಎಸೆತಗಳಲ್ಲಿ 11 ಬೌಂಡರಿ,  5ಸಿಕ್ಸರ್ಗಳ ಸಹಿತ 96 ರನ್​ಗಳಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. ಜೋಸ್ ಇಂಗ್ಲಿಸ್ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ಗಳ ಸಹಿತ 60,  ರಿಷಭ್ ಪಂತ್ 23 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ಗಳ ಸಹಿತ 35 ರನ್​ಗಳಿಸಿದ್ದರು.

221 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​​ಆರ್​ 19.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.  ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್​ಗಳನ್ನು ಸಿಡಿಸಿ 93 ರನ್​ಗಳಿಸಿದರು. ಧ್ರುವ್ ಜುರೆಲ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ರೇಸ್​ನಲ್ಲಿ ಇನ್ನೂ ಉಳಿದುಕೊಂಡಿದೆ. ನಾಯಕ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್​​ ಜೊತೆಯಾಟದಲ್ಲಿ 6.3 ಓವರ್​ಗಳಲ್ಲಿ 75 ರನ್ ಸೇರಿಸಿದರು. ಜೈಸ್ವಾಲ್ 23 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​​ ಸಹಿತ 43 ರನ್​​​ಗಳಿಸಿ ಆಕಾಶ್ ಸಿಂಗ್ ಬೌಲಿಂಗ್​​​ನಲ್ಲಿ ರಿಷಭ್ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಧ್ರುವ್ ಜುರೆಲ್ 2ನೇ ವಿಕೆಟ್​ ಜೊತೆಯಾಟದಲ್ಲಿ ಸೂರ್ಯವಂಶಿ ಜೊತೆಗೂಡಿ ಕೇವಲ 45 ಎಸೆತಗಳಲ್ಲಿ 105 ರನ್​​ ಸೇರಿಸಿದರು.  ಎಂದಿನಂತೆ ತಮ್ಮ ವಿಧ್ವಂಸಕ ಆಟವಾಡಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್​ಗಳ ಸಹಿತ 93 ರನ್​ಗಳಿಸಿ ಶತಕಕ್ಕೆ 7 ರನ್​ಗಳಿರುವಾಗ ಔಟ್ ಆದರು. ಮೊಹ್ಶಿನ್ ಖಾನ್ ಬೌಲಿಂಗ್​​​ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಅಬ್ಧುಲ್ ಸಮದ್​​ಗೆ ಕ್ಯಾಚ್ ನೀಡಿ  ನಿರ್ಗಮಿಸಿದರು. ಆದರೆ ವೈಭವ್ ಅಷ್ಟರಲ್ಲಾಗಲೇ ಪಂದ್ಯವನ್ನ ಸಂಪೂರ್ಣವಾಗಿ ರಾಜಸ್ಥಾನ್ ರಾಯಲ್ಸ್​ ಕಡೆಗೆ ವಾಲಿಸಿದ್ದರು. ಸೂರ್ಯವಂಶಿ ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ರಾಯಲ್ಸ್ 6 ಓವರ್​ಗಳಲ್ಲಿ ಕೇವಲ 30 ರನ್​ಗಳ ಅವಶ್ಯಕತೆ ಇತ್ತು. 4ನೇ ಕ್ರಮಾಂಕದಲ್ಲಿ ಬಂದ ಲುವಾನ್ ಡಿ ಪ್ರಿಟೋರಿಯಸ್​ 7 ರನ್​ಗಳಿಸಿ ರನ್​ಔಟ್ ಆದರು. ಆದರೆ ಧ್ರುವ್ ಜುರೆಲ್ ಹಾಗೂ ಡೊನೊವನ್ ಫೆರೇರಾ ಮುರಿಯದ​ 4ನೇ ವಿಕೆಟ್ ಜೊತೆಯಾಟದಲ್ಲಿ 29 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.  ಧ್ರುವ್ ಜುರೆಲ್ 38 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 53 ರನ್​ಗಳಿಸಿದರೆ, ಫೆರೇರಾ 10 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್​ ಸಹಿತ ಅಜೇಯ 16 ರನ್​ಗಳಿಸಿದರು.

Sulekha