ತಿಂಗಳಿಗೆ ₹78 ಕೋಟಿ ಬಡ್ಡಿ.. ₹4,500 ಕೋಟಿ ಹಗರಣ – ಸಿಐಡಿ ತನಿಖೆಯಲ್ಲಿ ಬಯಲಾಗುತ್ತಾ ಶಿವಾನಂದನ ಲೀಲೆ?
ಸಮಾಜ ಸೇವಕನ ಸೋಗಿನಲ್ಲಿ ನೀಲಣ್ಣನವರ ಕರಾಮತ್ತು!

ತಿಂಗಳಿಗೆ ₹78 ಕೋಟಿ ಬಡ್ಡಿ.. ₹4,500 ಕೋಟಿ ಹಗರಣ – ಸಿಐಡಿ ತನಿಖೆಯಲ್ಲಿ ಬಯಲಾಗುತ್ತಾ ಶಿವಾನಂದನ ಲೀಲೆ?ಸಮಾಜ ಸೇವಕನ ಸೋಗಿನಲ್ಲಿ ನೀಲಣ್ಣನವರ ಕರಾಮತ್ತು!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅದೊಂದು ವಿಡಿಯೋ ಈಗ ಶಿವಾನಂದ ನೀಲಣ್ಣನವರ ಕಟ್ಟಿದ್ದ ಸಾಮ್ರಾಜ್ಯವನ್ನೇ ಅಲುಗಾಡಿಸಿದೆ. ದೇಶದಲ್ಲಿ ರಾಕ್ಷಸರೇ ತುಂಬಿದ್ದಾರೆ ನಾನೇ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೀನಿ. ನನ್ನ ಬಳಿ 15,000 ಬಂದೂಕು ಇವೆ. 2028 ಕ್ಕೆ ನಾನು ಮುಖ್ಯಮಂತ್ರಿ ಆಗ್ಲಾ… 224 ಮತಕ್ಷೇತ್ರ ಗೆಲ್ಲೋದು ದೊಡ್ಡ ಕರಾಮತ್ತಾ ಎಂದು ಚಿಕ್ಕಮಗಳೂರಿನ ಕಡೂರಿನಲ್ಲಿ ಭಾಷಣ ಬಿಗಿದಿದ್ದ ಶಿವಾನಂದ ಈಗ ಪೊಲೀಸರ ಅತಿಥಿಯಾಗಿ ಸಿಐಡಿ ಅಧಿಕಾರಿಗಳೂ ಎಂಟ್ರಿಯಾಗಿದ್ದಾರೆ.

ಇದನ್ನೂ ಓದಿ : RCB ಕೈಯಲ್ಲಿ PBKS ಪ್ಲೇಆಫ್ಸ್ ಭವಿಷ್ಯ – 49ರ ಗೇಲಿಗೆ ಗೇಟ್ ಪಾಸ್ ಕೊಡ್ತಾರಾ?

ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಹೂಡಿಕೆ ಸಂಸ್ಥೆ ತೆರೆದು, ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಗೆ ಅಂದಾಜು ₹4,500 ಕೋಟಿ ವಂಚಿಸಿದ ಆರೋಪದ ಮೇಲೆ ಶಿವಾನಂದ ನೀಲಣ್ಣನವರನನ್ನು ಬಂಧಿಸಲಾಗಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದರಿಂದ, ಇದೀಗ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಭಾನುವಾರ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ಅವರು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುಮಾರು ಎರಡು ಗಂಟೆ ಸಭೆ ನಡೆಸಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಂದ ಪ್ರಕರಣದ ತನಿಖಾ ವರದಿಯ ಕಡತಗಳನ್ನು ಪಡೆದುಕೊಂಡರು. ಈ ಮಧ್ಯೆ, ಪ್ರಕರಣದ ಆರೋಪಿ, ನೀಲಣ್ಣವರನನ್ನು ಶನಿವಾರ ರಾತ್ರಿ ನ್ಯಾಯಧೀಶರ ಎದುರು ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಮೂರು ಖಾಸಗಿ ಬ್ಯಾಂಕ್‌ನಲ್ಲಿ ನಾಲ್ಕು ಅಕೌಂಟ್‌ಗಳಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆಯಾಗಿದೆ. ನಿತ್ಯ ಲಕ್ಷಾಂತರ ರೂಪಾಯಿ ಅಕೌಂಟ್ ಗಳಿಗೆ ಜಮಾ ಆಗುತ್ತಿದ್ದು, ಇದೇ ಖಾತೆಗಳಿಂದ ತಿಂಗಳಿಗೆ 78 ಕೋಟಿಗೂ ಅಧಿಕ ಹಣ 35 ಸಾವಿರ ಜನರಿಗೆ ಬಡ್ಡಿ ಜಮಾ ಆಗುತ್ತಿತ್ತು. ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆ ಆಗ್ತಿದ್ರೂ ಬ್ಯಾಂಕ್ ಅಧಿಕಾರಿಗಳು ಸೈಲೆಂಟ್ ಆಗಿದ್ದು ಬ್ಯಾಂಕ್ ಅಧಿಕಾರಿಗಳ ನಡೆ ಮೇಲೆ ಅನುಮಾನ ಮೂಡಿದೆ. ನೀಲಣ್ಣವರ್ ಜೊತೆಗೆ ಮೂರು ಬ್ಯಾಂಕ್‌ನ ಅಧಿಕಾರಿಗಳು ಶಾಮೀಲಾದ್ರಾ ಎನ್ನುವ ಪ್ರಶ್ನೆ ಮೂಡಿದ್ದು, ಸಿಐಡಿ ತನಿಖೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಕಳ್ಳಾಟ ಬಯಲಾಗಬೇಕಿದೆ.

ಇನ್ನೂ ಪ್ರಕರಣದಲ್ಲಿ ಕೆಲ‌ ಬ್ಯಾಂಕ್‌ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತವಾಗಿದ್ದು ಆನ್‌ಲೈನ್ ನಲ್ಲೇ ಎರಡೂವರೆ ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಆಗಿದೆ. ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಆದ್ರೂ ಬ್ಯಾಂಕ್ ನವರು ಗಪ್ ಚುಪ್ ಆಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಅಕೌಂಟ್ ಫ್ರೀಜ್ ಮಾಡಲಾಗಿದ್ದು ನೂರಾರು ಕೋಟಿ ಒಂದೊಂದು ಅಕೌಂಟ್‌ನಲ್ಲಿ ಪತ್ತೆಯಾಗಿದೆ. ನೂರಾರು ಕೋಟಿ ಅಕೌಂಟ್‌ನಲ್ಲಿ ಇದ್ರೂ ಬ್ಯಾಂಕ್ ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ. ಇಡಿ ಮತ್ತು ಐಟಿ ಗಮನಕ್ಕೆ ತರಬೇಕಿದ್ದ ಬ್ಯಾಂಕ್ ಅಧಿಕಾರಿಗಳು ಸೈಲೆಂಟ್ ಹಿಂದೆ ಅನುಮಾನ ವ್ಯಕ್ತವಾಗಿದೆ.

ಮಾಜಿ ಸೈನಿಕರು ಸೇರಿ ಅಂದಾಜು 4,500ಕ್ಕೂ ಅಧಿಕ ಮಂದಿ ನೀಲಣ್ಣವರ ಮಾಲಿಕತ್ವದ ಶಿವಂ ಅಸೋಸಿಯೇಟ್ಸ್‌ನಲ್ಲಿ ಅಂದಾಜು 4,500 ಕೋಟಿ ರೂ.ಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದಾರೆ. ಇಲ್ಲಿ ಆರ್‌ಬಿಐನ ಯಾವುದೇ ನಿಯಮಗಳು ಪಾಲನೆಯಾಗಿಲ್ಲ, ಬದಲಿಗೆ ಠೇವಣಿಗೆ ಹೆಚ್ಚಿನ ಬಡ್ಡಿ ಕೊಡುವ ಬಗ್ಗೆ ಆಮಿಷವೊಡ್ಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿವೆ. ಜನರ ಹಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಡಿಸಿ ಮೊಹಮ್ಮದ್ ರೋಷನ್ ಆದೇಶ ಮಾಡಿದ್ದರು. ಇದರ ಬೆನ್ನಲ್ಲೇ ನೀಲಣ್ಣವರನ ಮನೆ, ಶಿವಂ ಅಸೋಸಿಯೇಟ್ಸ್‌ ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಶುಕ್ರವಾರ ರಾತ್ರಿ ಆತನನ್ನು ಬಂಧಿಸಲಾಗಿತ್ತು. ಬಳಿಕ, ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಇದರ ಬೆನ್ನಲ್ಲೇ ಈಗ ಸಿಐಡಿ ತನಿಖೆ ಆರಂಭವಾಗಿದೆ.  ಸಾವಿರಾರು ಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ‌. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಳಿಕ‌ ಈಗ ಸಿಐಡಿ ತನಿಖೆ ಆರಂಭವಾಗಲಿದೆ. ಇಷ್ಟಾದರೂ ಹಣ ಹೂಡಿಕೆ ಮಾಡಿದ ಯಾರೊಬ್ಬರೂ ದೂರು ದಾಖಲಿಸಲು ಮುಂದಾಗಿಲ್ಲ ಎನ್ನುವುದೇ ಅಚ್ಚರಿಯಾಗಿದೆ.

Shantha Kumari

Leave a Reply

Your email address will not be published. Required fields are marked *