IPL ಫೈನಲ್.. PCB ನಖ್ವಿಗೆ ಆಹ್ವಾನ – PAK ಆಟಗಾರರಿಗೂ ಗ್ರೀನ್ ಸಿಗ್ನಲ್?
ಇಂಡೋ-ಪಾಕ್ ಸರಣಿ ಮತ್ತೆ ಸ್ಟಾರ್ಟ್?

ಭಾರತ ಮತ್ತು ಪಾಕಿಸ್ತಾನ ಅಂದ್ರೆ ಎಣ್ಣೆ ಸಿಗೇಕಾಯಿ ಇದ್ದಂತೆ. ರಾಜತಾಂತ್ರಿಕ ವಿಚಾರ ಆದ್ರೂ ಅಷ್ಟೇ.. ಸ್ಪೋರ್ಟ್ಸ್ ಅಂತಾ ಬಂದ್ರೂ ಅಷ್ಟೇ. ಬದ್ಧವೈರಿಗಳು ಅನ್ನೋ ಹಣೆಪಟ್ಟಿ ಇಡೀ ಜಗತ್ತಿಗೇ ಗೊತ್ತಿದೆ. ಕ್ರಿಕೆಟ್ನಲ್ಲೂ ಕೇವಲ ಐಸಿಸಿ ಮತ್ತು ಏಷ್ಯಾಕಪ್ನಲ್ಲಿ ಮಾತ್ರವೇ ಮುಖಾಮುಖಿ ಆಗ್ತಿದ್ದಾರೆ. ಹೀಗಿದ್ರೂ ಕ್ರಿಕೆಟ್ ಲೋಕವೇ ಬೆರಗಾಗುವಂಥ ಬೆಳವಣಿಗೆಯೊಂದು ನಡೆದಿದೆ.
ಇದನ್ನೂ ಓದಿ : RCB ಕೆಣಕಿದ ಪಂಜಾಬ್ ಕಿಂಗ್ಸ್ಗೆ ಕರ್ಮ ರಿಟರ್ನ್ಸ್ – ನಾಯಕರ ಬದಲಾವಣೆ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ದಾಖಲೆ
ಬಿಸಿಸಿಐ ಮತ್ತು ಪಿಸಿಬಿ ನಡುವಿನ ವಾರ್ ಇಂದು ನಿನ್ನೆಯದಲ್ಲ. ಆನ್ಫೀಲ್ಡ್ ಹಾಗೇ ಆಫ್ ದಿ ಫೀಲ್ಡ್ನಲ್ಲೂ ಫೈಟ್ ಇದ್ದಿದ್ದೇ. ಅದ್ರಲ್ಲೂ ಪೆಹಲ್ಗಾಮ್ ಅಟ್ಯಾಕ್ ಆದ್ಮೇಲೆ ಎರಡೂ ತಂಡಗಳ ಆಟಗಾರರು ಹ್ಯಾಂಡ್ ಶೇಕ್ ಪಾಲಿಸಿನೂ ಬಿಟ್ಟಾಕಿದ್ದಾರೆ. ಅಷ್ಟೇ ಯಾಕೆ 2025ರ ಏಷ್ಯಾಕಪ್ನಲ್ಲಿ ಭಾರತ ಟ್ರೋಫಿ ಗೆದ್ರೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಪಡೆದಿರಲಿಲ್ಲ. ಯಾಕಂದ್ರೆ ನಖ್ವಿ ಪಿಸಿಬಿ ಅಧ್ಯಕ್ಷನೂ ಆಗಿದ್ದಾರೆ ಅಂತಾ. ಆದ್ರೀಗ ಅದೇ ನಖ್ವಿ 19ನೇ ಸೀಸನ್ ಐಪಿಎಲ್ ಫೈನಲ್ ಪಂದ್ಯಕ್ಕೆ ಭಾರತಕ್ಕೆ ಬರ್ತಾರೆ ಅಂದ್ರೆ ಹೇಗಾಗ್ಬೇಡ. ಅದ್ರಲ್ಲೂ ಅಫಿಶಿಯಲ್ ಆಗಿಯೇ ಇನ್ವೈಟ್ ಮಾಡಲಾಗಿದೆ ಅನ್ನೋ ಶಾಕಿಂಗ್ ಸುದ್ದಿ ರಿವೀಲ್ ಆಗಿದೆ.
ಐಪಿಎಲ್ ಫೈನಲ್ ಪಂದ್ಯ & ಐಸಿಸಿ ಸಭೆಗಾಗಿ ಮೊಹ್ಸಿನ್ ನಖ್ವಿಗೆ ಆಹ್ವಾನ!
ಇದನ್ನ ಅಚ್ಚರಿ ಅಂತೀರೋ ಶಾಕಿಂಗ್ ಅನ್ಕೊಳ್ತಿರೋ ಗೊತ್ತಿಲ್ಲ. ಬಟ್ ಕ್ರಿಕೆಟ್ ಲೋಕವೇ ಕ್ಯೂರಿಯಸ್ ಆಗೋ ಡವಲಪ್ಮೆಂಟ್ ಅಂತೂ ನಡೀತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಭಾರತದಲ್ಲಿ ನಡೆಯುತ್ತಿರೋ 2026ರ ಐಪಿಎಲ್ ಫೈನಲ್ ಪಂದ್ಯ ವೀಕ್ಷಣೆಗೆ ಹಾಗೇ ಐಸಿಸಿ ಬೋರ್ಡ್ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಲಾಗಿದೆ. ಮೇ 30 ಮತ್ತು 31 ರಂದು ಭಾರತದ ಅಹಮದಾಬಾದ್ನಲ್ಲಿ ಅಂತರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ತ್ರೈಮಾಸಿಕ ಸಭೆ ನಡೆಯಲಿದೆ. ಇದೇ ವೇಳೆ ಮೇ 31 ರಂದು ವಿಶ್ವದ ಅತಿ ದೊಡ್ಡ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯವೂ ಇದೆ. ಈ ಎರಡೂ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಮೊಹ್ಸಿನ್ ನಖ್ವಿ ಅವರಿಗೆ ಆಮಂತ್ರಣ ನೀಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗಿದೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವೂ ಇದೆ. ಮೊಹ್ಸಿನ್ ನಖ್ವಿ ಕೇವಲ ಪಿಸಿಬಿ ಅಧ್ಯಕ್ಷರಷ್ಟೇ ಅಲ್ಲ. ಪಾಕಿಸ್ತಾನದ ಹಾಲಿ ಗೃಹ ಸಚಿವರೂ ಹೌದು. ಹೀಗಾಗಿ ನಖ್ವಿ ಅವರ ಭಾರತ ಪ್ರವಾಸ ರಾಜತಾಂತ್ರಿಕವಾಗಿಯೂ ಅತ್ಯಂತ ಸೂಕ್ಷ್ಮವಾಗಿದೆ. ಌಂಡ್ ಇಲ್ಲಿ ನಖ್ವಿ ಭಾರತಕ್ಕೆ ಪ್ರಯಾಣ ಮಾಡಬೇಕಾ ಅಥವಾ ಬೇಡವಾ ಅನ್ನೋದನ್ನ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಿರ್ಧಾರ ಮಾಡ್ತಾರೆ. ಷರೀಫ್ ಅನುಮತಿ ನೀಡಿದ್ರಷ್ಟೇ ನಖ್ವಿ ಭಾರತಕ್ಕೆ ಬರುವಂಥದ್ದು. ಆದ್ರೆ ನಖ್ವಿಗೆ ಆಹ್ವಾನ ನೀಡಿರೋ ವಿಚಾರ ಬೆಳಕಿಗೆ ಬರ್ತಿದ್ದಂತೆ ಬೇರೆಯದ್ದೇ ಚರ್ಚೆಯಾಗ್ತಿದೆ.
ನಖ್ವಿ ಭೇಟಿ ಸುತ್ತ ಪ್ರಶ್ನೆಗಳ ಹುತ್ತ!
ಭಾರತ ಮತ್ತು ಪಾಕ್ ದ್ವಿಪಕ್ಷೀಯ ಸರಣಿಗಳು ಮತ್ತೆ ಪುನಾರಂಭ ಚರ್ಚೆ
ಐಪಿಎಲ್ ನಲ್ಲಿ ಪಾಕಿಸ್ತಾನಿ ಆಟಗಾರರಿಗೆ ಭಾಗವಹಿಸಲು ಅವಕಾಶ ನಿರೀಕ್ಷೆ
ಟೂರ್ನಮೆಂಟ್ & ಸರಣಿಗಳಿಗೆ ಎರಡೂ ರಾಷ್ಟ್ರಗಳಿಗೆ ಆಟಗಾರರ ಪ್ರವಾಸ
ಹೀಗೆ ನಖ್ವಿಗೆ ಆಹ್ವಾನ ನೀಡಿರೋ ವಿಚಾರ ಈಗ ಬಾರೀ ಚರ್ಚೆಯಾಗ್ತಿದೆ. ಅದೂ ಅಲ್ದೇ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಇರೋದ್ರಿಂದ ಐಸಿಸಿ ಸಭೆಯಲ್ಲಿ ಅವ್ರ ಉಪಸ್ಥಿತಿ ಮುಖ್ಯವಾಗುತ್ತೆ. ಹಾಗೇ ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ದೃಷ್ಟಿಯಿಂದ ಪರಿಸ್ಥಿತಿ ತಿಳಿಯಾಗಬಹುದು ಅನ್ನೋ ನಿರೀಕ್ಷೆಯೂ ಇದೆ. ಆದ್ರೆ ಇದೇ ನಖ್ವಿಯಿಂದಲೇ ಭಾರತ ಮತ್ತು ಪಾಕ್ ನಡುವಿನ ವಿವಾದ ಉದ್ವಿಘ್ನವಾಗಿದ್ದರ ಬಗ್ಗೆಯೂ ಚರ್ಚೆಯಾಗ್ತಿದೆ.
ಭಾರತ ಗೆದ್ರೂ ಟ್ರೋಫಿ ಕೊಡದೆ ಹೊತ್ತೊಯ್ದಿದ್ದ ನಖ್ವಿ!
2025ರ ಏಷ್ಯಾಕಪ್ ಫೈನಲ್ನಲ್ಲಿ ಭಾರತ ಪಾಕಿಸ್ತಾನವನ್ನ ಸೋಲಿಸಿ ಚಾಂಪಿಯನ್ ಆಗಿತ್ತು. ಪ್ರಶಸ್ತಿ ಸಂಭಾರಂಭದ ವೇಳೆ ಭಾರತೀಯ ಆಟಗಾರರು ನಖ್ವಿ ಕೈಯಿಂದ ಟ್ರೋಫಿ ಪಡೆಯೋಕೆ ನಿರಾಕರಿಸಿದ್ರು. ಈ ವೇಳೆ ನಖ್ವಿ ಮೈದಾನದಿಂದ ಟ್ರೋಫಿಯನ್ನೇ ಹೊತ್ತೊಯ್ದಿದ್ದರು. ಬಿಸಿಸಿಐ ಐಸಿಸಿಗೆ ಪತ್ರ ಬರೆದು ಟ್ರೋಫಿ ಹಸ್ತಾಂತರಕ್ಕೆ ಕೇಳಿದ್ರೂ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ರನ್ನೇ ಎಸಿಸಿ ಕಚೇರಿಗೆ ಕಳಿಸಿ ನನ್ನ ಕೈಯಿಂದಲೇ ಟ್ರೋಫಿ ತಗೊಂಡು ಹೋಗ್ಲಿ ಅಂತಾ ಉದ್ಧಟತನ ಮೆರೆದಿದ್ರು. ಸ್ಟಿಲ್ ಈಗಲೂ ಕೂಡ ಆ ಟ್ರೋಫಿ ಭಾರತದ ಕೈ ಸೇರಿಲ್ಲ. ಹೀಗಿದ್ರೂ ನಖ್ವಿಯನ್ನ ಐಪಿಎಲ್ ಫೈನಲ್ ಪಂದ್ಯಕ್ಕಾಗಿ ಭಾರತಕ್ಕೆ ಆಹ್ವಾನ ನೀಡಿದ್ದರ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಿರಿ

