ಧಗ ಧಗ ಹೊತ್ತಿ ಉರಿದ ಮಂಗಳೂರಿನಿಂದ ಬೆಂಗಳೂರಿಗೆ ಬರ್ತಿದ್ದ ಬಸ್- ಖಾಸಗಿ ಬಸ್‌ನಲ್ಲಿದ್ದ 36 ಮಂದಿ ಬೆಂಕಿ ಅವಘಡದಿಂದ ಬಚಾವ್

ಧಗ ಧಗ ಹೊತ್ತಿ ಉರಿದ ಮಂಗಳೂರಿನಿಂದ ಬೆಂಗಳೂರಿಗೆ ಬರ್ತಿದ್ದ ಬಸ್- ಖಾಸಗಿ ಬಸ್‌ನಲ್ಲಿದ್ದ 36 ಮಂದಿ  ಬೆಂಕಿ ಅವಘಡದಿಂದ ಬಚಾವ್

ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದಿದೆ. ಹಾಸನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಂಕಿ ಅನಾಹುತದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್‌! – ಈ ದಿನ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ!

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿದೆ. ಭರತ್ ಕಂಪನಿಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್, ರಾತ್ರಿ ವೇಳೆ ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿತ್ತು. ಶಾಂತಿಗ್ರಾಮದ ಬಳಿ ಬಂದಾಗ ಹಿಂಬದಿಯ ಟೈರ್ ಭಾಗದಲ್ಲಿ ಅಚಾನಕ್​ ಬೆಂಕಿ ಹೊತ್ತಿಕೊಂಡಿತ್ತು. ಬಸ್ ಚಲಿಸುತ್ತಿರುವ ವೇಳೆ ಟೈರ್ ಭಾಗದಿಂದ ಏನೋ ಅಸಹಜವಾದ ಶಬ್ದ ಹಾಗೂ ಹೊಗೆ ಬರುತ್ತಿರುವುದು ಚಾಲಕನ ಗಮನಕ್ಕೆ ಬಂದಿದೆ. ತಕ್ಷಣ ಆತ ಬಸ್ ನ ವೇಗ ಕುಗ್ಗಿಸಿ, ರಸ್ತೆಯ ಪಕ್ಕ ಸುರಕ್ಷಿತ ಸ್ಥಳದಲ್ಲಿ ಬಸ್ ನಿಲ್ಲಿಸಿದ್ದಾನೆ. ನಂತರ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ಚಾಲಕ, ಮೊದಲಿಗೆ ಪ್ರಯಾಣಿಕರ ಜೀವ ರಕ್ಷಣೆಗೆ ಆದ್ಯತೆ ನೀಡಿದ್ದಾರೆ.

ರಾತ್ರಿವೇಳೆ ಆಗಿದ್ದರಿಂದ ಬಸ್ ಒಳಗೆ ಬಹುತೇಕ ಪ್ರಯಾಣಿಕರು ನಿದ್ದೆಯ ಮಂಪರಿನಲ್ಲಿ ಇದ್ದರು. ತಡವಾದರೆ ಏನಾಗಬಹುದು ಎಂಬ ಆತಂಕದಲ್ಲಿ, ಚಾಲಕ ಪ್ರಯಾಣಿಕರನ್ನು ಜೋರಾಗಿ ಕೂಗಿ ಎಬ್ಬಿಸಿ, ತಕ್ಷಣ ಬಸ್ ನಿಂದ ಕೆಳಗಿಳಿಯುವಂತೆ ಸೂಚಿಸಿದರು. ಕೆಲ ಕ್ಷಣಗಳಲ್ಲಿ ಬಸ್ ಒಳಗಿದ್ದ 36 ಮಂದಿ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಪ್ರಯಾಣಿಕರು ಎಲ್ಲರೂ ಬಸ್ ನಿಂದ ದೂರ ಸರಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ತೀವ್ರವಾಗಿ ಹೊತ್ತಿಉರಿದಿದೆ. ಬೆಂಕಿ ಭಾರೀ ರಭಸದಿಂದ ಹಬ್ಬುತ್ತಿದ್ದಂತೆ, ಸ್ಥಳೀಯರು ಕೂಡ ಸಹಾಯಕ್ಕೆ ಧಾವಿಸಿದರು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಬಗ್ಗೆ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿ, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡಿದರು. ಆದರೂ ಕೂಡಾ ಬೆಂಕಿಯ ಉರಿಯ ರಭಸಕ್ಕೆ ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ ನೊಳಗಿನ ಪ್ರಯಾಣಿಕರ ಸಾಮಾನು ಕೂಡಾ ಬೆಂಕಿಗಾಹುತಿಯಾದೆ. ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲೇ ಬಸ್ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಕಂಡು ಹಾದು ಹೋಗುತ್ತಿದ್ದ ವಾಹನ ಸವಾರರು ಬೆಚ್ಚಿಬಿದ್ದರು. ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾದರೂ, ಪೊಲೀಸರು ಮತ್ತು ಸ್ಥಳೀಯರ ಸಹಕಾರದಿಂದ ವಾಹನ ಸಂಚಾರವನ್ನು ನಿಯಂತ್ರಿಸಲಾಯಿತು.

 

Sulekha

Leave a Reply

Your email address will not be published. Required fields are marked *