ಮೇ 20ರಂದು ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ! – ಬಸ್ ಓಡಾಟ ಇರುತ್ತಾ? ಇಲ್ವಾ?

ರಾಜ್ಯ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಹಾಗೂ ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಈ ನಿರ್ಧಾರವನ್ನು ಪ್ರಕಟಿಸಿದ್ದು, ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: ರಾಜನಾದ ಕೊಹ್ಲಿ.. ಮಂಕಾದ ಮನೀಶ್ – ಒಟ್ಟೊಟ್ಟಿಗೆ ಬಂದವರ ದಾರಿ ಬದಲಾಗಿದ್ದೇಗೆ?
ನಾಲ್ಕು ಸಾರಿಗೆ ನಿಗಮಗಳ ನೌಕರರ ಮೂಲ ವೇತನವನ್ನು ಶೇ25ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದರೂ ಸರ್ಕಾರ ಏಕಪಕ್ಷೀಯವಾಗಿ ಶೇ 12.5ರಷ್ಟು ಹೆಚ್ಚಳದ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಸರ್ಕಾರಿ ನೌಕರರಿಗೆ ನಾಲ್ಕು ವರ್ಷಗಳ ಹಿಂದೆಯೇ 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ 27.5ರಷ್ಟು ವೇತನ ಹೆಚ್ಚಿಸಿರುವ ರಾಜ್ಯ ಸರ್ಕಾರವು ಸಾರಿಗೆ ನೌಕರರ ವಿಷಯದಲ್ಲಿ ತಾರತಮ್ಯದ ನಿಲುವು ತಳೆದಿದೆ. ಕಳೆದ ಫೆಬ್ರುವರಿ 18ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ತಿದ್ದುಪಡಿ ಮಾಡಿ 2025ರ ಜನವರಿ 1ರ ಬದಲು 2024ರ ಜ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೂ ಸರ್ಕಾರ ಸ್ಪಂದಿಸಿಲ್ಲ ಎಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಲ್ತಿಯಲ್ಲಿರುವ ಕೈಗಾರಿಕಾ ಒಪ್ಪಂದಗಳ ಪ್ರಕಾರ 2022ರಲ್ಲಿದ್ದ ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು, ವಾರ್ಷಿಕ ಬಡ್ತಿಯನ್ನು 2024ರ ಜ.25ರ ಬೇಡಿಕೆಯ ಪಟ್ಟಿಯಲ್ಲಿ ಇರುವಂತೆ ಹೆಚ್ಚಿಸಿ, ವೇತನ ಶ್ರೇಣಿ ರಚಿಸಬೇಕು. 2024ರಿಂದ ನಾಲ್ಕು ವರ್ಷಗಳಿಗೆ ಅನ್ವಯವಾಗುವಂತೆ ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕು. ಬಾಟಾ ಮತ್ತಿತರ ಭತ್ಯೆಗಳನ್ನು ಹೆಚ್ಚಿಸಬೇಕು. 12 ತಿಂಗಳ ಬಾಕಿ ಹಣವನ್ನು ಕರ್ತವ್ಯದಲ್ಲಿರುವವರಿಗೂ ನಿವೃತ್ತರಿಗೂ ಪಾವತಿಸ ಬೇಕು. 26 ತಿಂಗಳ ಬಾಕಿ ಹಣ ₹1,272 ಕೋಟಿಯನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.

ನೋಡಿರಿ

