ನಟ ದಿಲೀಪ್ ರಾಜ್ ಅಂತಿಮ ಕ್ಷಣಗಳು ಹೃದಯ ಹಿಂಡುವಂತಿದೆ – ಪತ್ನಿಯ ಹೋರಾಟಕ್ಕೂ ದೇವರು ಕರುಣೆ ತೋರಲೇ ಇಲ್ಲ

ನಟ ದಿಲೀಪ್ ರಾಜ್ ಅಂತಿಮ ಕ್ಷಣಗಳು ಹೃದಯ ಹಿಂಡುವಂತಿದೆ – ಪತ್ನಿಯ ಹೋರಾಟಕ್ಕೂ ದೇವರು ಕರುಣೆ ತೋರಲೇ ಇಲ್ಲ

ಕನ್ನಡ ನಟ-ನಿರ್ಮಾಪಕ ದಿಲೀಪ್ ರಾಜ್ ಇನ್ನು ನೆನಪು ಮಾತ್ರ. ಆದರೆ, ಅವರ ಕೊನೇ ಕ್ಷಣಗಳು ಮಾತ್ರ ನಿಜಕ್ಕೂ ಹೃದಯಹಿಂಡುವಂತಿದೆ. ಪತ್ನಿಯ ಕರುಣಾಜನಕ ಹೋರಾಟ, ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ, ಸಿಗದ ಆಂಬ್ಯುಲೆನ್ಸ್, ತನ್ನ ಗಂಡನನ್ನು ಉಳಿಸಿಕೊಳ್ಳಲಾಗದೇ ಶ್ರೀವಿದ್ಯಾ ಆಸ್ಪತ್ರೆ ಗೋಡೆಗಳೇ ನಡುಗುವಂತೆ ಆಕ್ರಂದನ ಮಾಡಿರುವುದು ನಿಜಕ್ಕೂ ಕರುಳುಹಿಂಡುವಂತಿದೆ. ಬೆಂಗಳೂರಲ್ಲಿ ಎಲ್ಲವೂ ಟೈಮ್‌ಗೆ ಸರಿಯಾಗಿ ಸಿಗುತ್ತದೆ. ಆದರೆ, ಒಂದು ಜೀವ ಉಳಿಸಿಕೊಳ್ಳಲು ಬೇಕಾದ ಸಮಯಕ್ಕೆ ಯಾವುದೂ ಸಿಗುವುದಿಲ್ಲ ಅನ್ನೋದಕ್ಕೆ ಈ ಮನಮಿಡಿಯುವ ಕ್ಷಣಗಳೇ ಸಾಕ್ಷಿ.

ಇದನ್ನೂ ಓದಿ:ನನ್ನ ಬಿಟ್ಟು ಹೋಗಬೇಡ – ದಿಲೀಪ್ ರಾಜ್ ಮೃತದೇಹದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ

ಮೇ 13ರಂದು ಬೆಳಗ್ಗೆ 6 ಗಂಟೆಯ ಸಮಯ. ನಟ, ನಿರ್ಮಾಪಕ ದಿಲೀಪ್ ರಾಜ್‌ಗೆ ಎದೆ ನೋವು ಕಾಣಿಸಿಕೊಂಡಿದೆ. ದಿಕ್ಕೇ ತೋಚದಂತಾದ ಪತ್ನಿ ಶ್ರೀವಿದ್ಯಾ ರಸ್ತೆಗೆ ಓಡೋಡಿ ಬಂದಿದ್ದಾರೆ. ಆಗ ಮನೆ ಹತ್ತಿರವೇ ಸಿಕ್ಕಿತು ಆಟೋ. ಆಟೋ ಚಾಲಕ ದೇವೇಂದ್ರ ನಾಯ್ಡು  ಓಡೋಡಿ ಬಂದರು. ಅವರೇ ಈ ಘಟನೆ ಬಗ್ಗೆ ವಿವರಿಸಿದ್ದಾರೆ. ‘ನಾನು ದಿಲೀಪ್ ಅವರ ಮನೆಯ ಹತ್ತಿರವೇ ಇದ್ದೆ. ಬೆಳಿಗ್ಗೆ ಸುಮಾರು 6:10ಕ್ಕೆ ಅವರ ಪತ್ನಿ ಶ್ರೀವಿದ್ಯಾ  ಆತಂಕದಿಂದ ಕರೆದರು. ಕೂಡಲೇ ಹೋದೆ. ದಿಲೀಪ್ ಅವರು ಬಿದ್ದುಕೊಂಡಿರುವ ಸ್ಥಿತಿಯಲ್ಲಿದ್ದರು. ನಾನು ಮತ್ತು ಅವರ ಮನೆಯ  ಭದ್ರತಾ ಸಿಬ್ಬಂದಿ ಸೇರಿ ದಿಲೀಪ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡೆವು. ಆ ಸಮಯದಲ್ಲಿ ಅವರಿಗೆ ಸಿಪಿಆರ್ (CPR) ಕೂಡ ಮಾಡಿದೆವು. ಸ್ವಲ್ಪ ಉಸಿರಾಟ ಇತ್ತು. ಆದರೆ 6:15ರ ಸುಮಾರಿಗೆ ರಾಜರಾಜೇಶ್ವರಿ ನಗರದ ಆರ್ಚ್ ಹತ್ತಿರ ಬರುತ್ತಿದ್ದಂತೆ ದೊಡ್ಡ ಉಸಿರು ಬಿಟ್ಟರು’ಎಂದು ದೇವೇಂದ್ರ ನಾಯ್ಡು ವಿವರಿಸಿದ್ದಾರೆ. ನಂತರದ ಘಟನೆಗಳ ಬಗ್ಗೆಯೂ ಇವರೇ ವಿವರಿಸಿದ್ದಾರೆ.

‘ದಿಲೀಪ್ ಅವರ ಸ್ಥಿತಿ ಕಂಡು ಪತ್ನಿ ಶ್ರೀವಿದ್ಯಾ  ಅವರು ಮೊದಲು ಜಯದೇವ ಆಸ್ಪತ್ರೆಗೆ ಹೋಗೋಣ ಎಂದಿದ್ದರು. ಆದರೆ ಅದು ದೂರವಾಗುತ್ತದೆ ಎಂಬ ಕಾರಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು ಹೋದ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಸಿಬ್ಬಂದಿಗಳು ಕೇವಲ ಬಿಪಿ ಚೆಕ್ ಮಾಡಿ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರು. ಕೆಆರ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಯಾವುದೇ ಸ್ಪಂದನೆ ಬರಲಿಲ್ಲ’ ‘ಆಸ್ಪತ್ರೆಯವರು ಆ್ಯಂಬುಲೆನ್ಸ್ ನೀಡಿರಲಿಲ್ಲ. ಬಹುಶಃ ಭಯದಿಂದ ಇರಬಹುದು ಅಥವಾ ಅವರಿಗೆ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದಿರಬಹುದು. ಕೊನೆಗೆ ಕಾರ್ ಮೂಲಕ ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಸುದ್ದಿ ಕೇಳುತ್ತಿದ್ದಂತೆ ದಿಲೀಪ್ ಪತ್ನಿ ಇಡೀ ಆಸ್ಪತ್ರೆಗೆ ಕೇಳಿಸುವಂತೆ ಜೋರಾಗಿ ಕಿರುಚಾಡಿ ಅತ್ತಿದ್ದಾರೆ. ಎಲ್ಲಾ ದೇವರಿಗೂ ಬೇಡಿಕೊಂಡರು, ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಪ್ರಾರ್ಥಿಸಿದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು ಎಂದು ತಾನು ಕಣ್ಣಾರೆ ಕಂಡ ಕರುಣಾಜನಕ ಸನ್ನಿವೇಶವನ್ನು ದೇವೇಂದ್ರ ನಾಯ್ಡು ಭಾವುಕರಾಗಿ ವಿವರಿಸಿದ್ದಾರೆ.

ನಿಜಕ್ಕೂ ಆ ಕ್ಷಣ ಹೃದಯಹಿಂಡುವಂತದ್ದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ. ಕರೆದುಕೊಂಡು ಹೋಗಲು ಪತ್ನಿ ಶ್ರೀವಿದ್ಯಾ ಪಟ್ಟ ಪಾಡು ದೇವರಿಗೇ ಗೊತ್ತು. ಆಸ್ಪತ್ರೆಗಳಲ್ಲಿ ಸಿಗದ ಸ್ಪಂದನೆ, ಆ ಆಸ್ಪತ್ರೆ ಸಿಬ್ಬಂದಿಗೇನು ಗೊತ್ತು. ದಿಲೀಪ್ ರಾಜ್ ಶ್ರೀವಿದ್ಯಾರ ಪ್ರಪಂಚವಾಗಿದ್ದರು ಅನ್ನೋದು. ಇದೀಗ ದಿಲೀಪ್ ರಾಜ್ ಇಲ್ಲದೇ ಶ್ರೀವಿದ್ಯಾರ ಆಕ್ರಂದನ ಮುಗಿಲುಮುಟ್ಟಿದೆ. ಮಕ್ಕಳಿಬ್ಬರು ತಂದೆಯಿಲ್ಲದೇ ಮೌನವಾಗಿದ್ದಾರೆ. ಇದಕ್ಕೆ ಹೇಳುವುದು.. ವಿಧಿಯಾಟ ಬಲ್ಲವರಾರು..

Sulekha

Leave a Reply

Your email address will not be published. Required fields are marked *