ಹಿಜಾಬ್‌ಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ರಾಜ್ಯ ಸರ್ಕಾರ! – ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆ

ಹಿಜಾಬ್‌ಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ರಾಜ್ಯ ಸರ್ಕಾರ! – ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆ

ರಾಜ್ಯದಲ್ಲಿ ಕೊಂಚ ತಣ್ಣಗಾಗಿದ್ದ ಹಿಜಾಬ್‌ ವಿವಾದ ಮತ್ತೆ ಶುರುವಾಗಿದೆ. 2022ರಲ್ಲಿ ಬಿಜೆಪಿ ಸರ್ಕಾರದ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದುಕೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್, ಪೇಟ ಸೇರಿದಂತೆ ನಿಗದಿತ ಸಮವಸ್ತ್ರದೊಂದಿಗೆ ಧಾರ್ಮಿಕ ವಸ್ತ್ರಗಳನ್ನು ಧರಿಸಲು ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ. ಇದೀಗ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ:  ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ – ರೋಹಿತ್ ಶರ್ಮಾ ಹಿಂದಿಕ್ಕಿದ ಕೊಹ್ಲಿ ಈಗ ನಂಬರ್-1

ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಸರ್ಕಾರದ ನಡೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ ಅಶೋಕ್‌ ಈ ಸರ್ಕಾರದ ನಡೆಗೆ ಗರಂ ಆಗಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿತ್ತು. ಈಗ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಯಾವ ಸೀಮೆ ಜಾತ್ಯತೀತತೆ? ಎಂದು ಪ್ರಶ್ನಿಸಿದ ಅಶೋಕ್, ಒಂದು ಸಮುದಾಯದ ಹಿಜಾಬ್‌ಗೆ ಹಸಿರು ನಿಶಾನೆ ತೋರಿರುವ ಸಿದ್ದರಾಮಯ್ಯ ಸರ್ಕಾರ ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗಲ್ಲ ಅಂತ ಭಾವಿಸಿದ್ದೀರಾ ಸಿಎಂ? ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು ಧರ್ಮದ ಆಧಾರದಲ್ಲಿ ಮಕ್ಕಳನ್ನ ವಿಭಜಿಸ್ತಿರುವ ನಿಮ್ಮ ನಡೆಯೇ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದೆ. ಈ ಕುರಿತು ಹಿಂದೂ ಮುಖಂಡ ಸುನೀಲ್ ಕೆ.ಆರ್ ಮಾತನಾಡಿ, ಸರ್ಕಾರ ಇಸ್ಲಾಮಿಕರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ಓಲೈಕೆಯೆ ಬಹು ಮುಖ್ಯವಾದಂತಿದೆ. ಮೂಲಭೂತವಾದಿ ಸಂಘಟನೆಗಳ ಜೊತೆಗೆ ರಾಜ್ಯ ಸರ್ಕಾರ ನಿಂತಿದೆ ಎಂದು ಕಿಡಿಕಾರಿದ್ದಾರೆ. ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ನಿರ್ಧಾರದ ಹಿಂದೆ ಬಹಳ ದೊಡ್ಡ ಷಡ್ಯಂತ್ರವಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *