ವಿಜಯ್‌ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಗೇಟ್‌ಪಾಸ್!‌ – ಟೀಕೆ ಬೆನ್ನಲ್ಲೇ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಹುದ್ದೆ ಹಿಂಪಡೆದ ದಳಪತಿ!

ವಿಜಯ್‌ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಗೇಟ್‌ಪಾಸ್!‌ – ಟೀಕೆ ಬೆನ್ನಲ್ಲೇ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಹುದ್ದೆ ಹಿಂಪಡೆದ ದಳಪತಿ!

ತಮಿಳುನಾಡು ವಿಧಾನಸಭೆಯಲ್ಲಿ ದಳಪತಿ ವಿಜಯ್‌ ಗೆದ್ದು, ಸಿಎಂ ಪಟ್ಟೇರಿದ್ದಾರೆ. ವಿಜಯ್ ವಿಶ್ವಾಸಮತದ ಸಂದರ್ಭದಲ್ಲಿ ಜ್ಯೋತಿಷಿ ಹಾಗೂ ಟಿವಿಕೆ ವಕ್ತಾರ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ (ರಾಜಕೀಯ) ಹುದ್ದೆಗೆ ನೇಮಿಸಿದ್ದರು. ರಿಕ್ಕಿ ರಾಧನ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆ ನೀಡಿದ್ದಕ್ಕೆ ಸರ್ಕಾರದ ಮಿತ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ತಮಿಳುನಾಡು ಸರ್ಕಾರ ರಿಕ್ಕಿ ರಾಧನ್ ಅವರ ನೇಮಕಾತಿ ಆದೇಶವನ್ನು ಹಿಂಪಡೆದಿದೆ.

ಇದನ್ನೂ ಓದಿ: ದೇವರ ದರ್ಶನಕ್ಕೆ ಹೋದವರು ಮಸಣ ಸೇರಿದರು! – ದೇಗುಲದ ಕಾಂಪೌಂಡ್‌ ಗೋಡೆ ಕುಸಿತಕ್ಕೆ 6 ಮಂದಿ ಬಲಿ!

ಮಂಗಳವಾರ ಪ್ರಕಟಗೊಂಡಿದ್ದ ಈ ನೇಮಕಾತಿಗೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವ್ಯಕ್ತಿಗೆ ಸರ್ಕಾರದ ಅಧಿಕೃತ ಹುದ್ದೆ ನೀಡಿರುವುದನ್ನು ಪ್ರಶ್ನಿಸಿ ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಗಿತ್ತು. ವಿಶೇಷವಾಗಿ ವಿಸಿಕೆ, ಡಿಎಂಡಿಕೆ ಹಾಗೂ ಎಡಪಂಥೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ತಮಿಳುನಾಡು ಸರ್ಕಾರ ರಿಕ್ಕಿ ರಾಧನ್ ಅವರ ನೇಮಕಾತಿ ಆದೇಶವನ್ನು ಹಿಂಪಡೆದಿದೆ.

ವಿಧಾನಸಭೆಯಲ್ಲಿ ಮಾತನಾಡಿದ ವಿಸಿಕೆ ಶಾಸಕ ವನ್ನಿ ಅರಸು, ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ತಮ್ಮ ಪಕ್ಷದ ಪರವಾಗಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯಲ್ಲಿ ಮೂಢನಂಬಿಕೆ ಮೂಲಕ ಜನರನ್ನು ಶೋಷಿಸುವವರ ವಿರುದ್ಧ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಅವರು ನಿನ್ನೆಯೇ ಈ ನೇಮಕಾತಿಯನ್ನು ವಿರೋಧಿಸಿ ಹೇಳಿಕೆ ನೀಡಿದ್ದರು.

ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಕೂಡ ನೇಮಕಾತಿಯನ್ನು ಖಂಡಿಸಿ, ಅವರು ನಿಮ್ಮ ರಾಜಗುರು ಆಗಿದ್ದರೆ ಅದು ವೈಯಕ್ತಿಕ ವಿಷಯ. ಆದರೆ ಅವರಿಗೆ ಉನ್ನತ ಸರ್ಕಾರಿ ಹುದ್ದೆ ನೀಡುವುದು ಒಪ್ಪಲಾಗುವುದಿಲ್ಲ. ಅನೇಕ ಯುವಕರು ನಿಮಗೆ ಮತ ಹಾಕಿದ್ದಾರೆ. ಅವರಿಗೆ ನೀವು ಯಾವ ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ತಿಳಿಸಿದ್ದರು. ಇಂದು ಸರ್ಕಾರ ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ.

ಮತ್ತೊಂದ್ಕಡೆ ತಿರುವಳ್ಳೂರು ಜಿಲ್ಲೆಯ ಕೀಳನೂರು ಗ್ರಾಮದ ವಕೀಲ ಆರ್ ರತಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಕ್ವೋ ವಾರಂಟೊ ಅರ್ಜಿ ಸಲ್ಲಿಸಿ, ಸಾರ್ವಜನಿಕ ಇಲಾಖೆ ಹೊರಡಿಸಿದ್ದ ಆದೇಶದ ಆಧಾರದ ಮೇಲೆ ರಿಕ್ಕಿ ರಾಧನ್ ಪಂಡಿತ್ ಅವರು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ (ರಾಜಕೀಯ) ಹುದ್ದೆ ವಹಿಸಿಕೊಳ್ಳುವ ಅಧಿಕಾರವನ್ನು ಪ್ರಶ್ನಿಸಿದ್ದರು. ಅವರು ಅರ್ಜಿಯಲ್ಲಿ, ಉಮಾದೇವಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸರ್ಕಾರದ ಯಾವುದೇ ಸೇವಾ ನೇಮಕಾತಿ ಅಥವಾ ಸಾರ್ವಜನಿಕ ಹುದ್ದೆಯ ನೇಮಕಾತಿ ಸಂವಿಧಾನದ ವಿಧಿ 309 ಅಡಿಯಲ್ಲಿ ರೂಪಿಸಲಾದ ನಿಯಮಾವಳಿಗಳ ಪ್ರಕಾರವೇ ನಡೆಯಬೇಕು ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದರು. ಸಂವಿಧಾನಾತ್ಮಕ ವ್ಯವಸ್ಥೆ ಹೊರತಾಗಿ ಯಾವುದೇ ನೇಮಕಾತಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.

Shwetha M

Leave a Reply

Your email address will not be published. Required fields are marked *