RCB Vs KKR ನಡುವೆ ಇಂದು ಹೈವೋಲ್ಟೇಜ್ ಮ್ಯಾಚ್ – ಪ್ಲೇ ಆಫ್ಸ್ ರೇಸ್ ಬ್ಯಾಟಲ್ ಗೆಲ್ಲೋದ್ಯಾರು?

ಐಪಿಎಲ್ ಅಖಾಡದಲ್ಲಿ ಈಗ ಪ್ಲೇ ಆಫ್ಸ್ ರೇಸ್ ಜಿದ್ದಾಜಿದ್ದಿ ಪೀಕ್ ನಲ್ಲಿದೆ. ಹೈದರಾಬಾದ್ ತಂಡವನ್ನು ಸೋಲಿಸೋ ಮೂಲಕ ಗುಜರಾತ್ ಟೈಟನ್ಸ್ ನಂಬರ್ 1 ಸ್ಥಾನಕ್ಕೆ ಜಿಗಿದಿದೆ. ಇವತ್ತು ಈ ಸೀಸನ್ ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಪ್ಲೇ ಆಫ್ಸ್ ರೇಸ್ ನಲ್ಲಿರೋ ಎರಡೂ ತಂಡಗಳಿಗೆ ಮಸ್ಟ್ ವಿನ್ ಮ್ಯಾಚ್ ಆಗಿದೆ.
ಇದನ್ನೂ ಓದಿ :ಗುಜರಾತ್ ದಾಳಿಗೆ ಹೈದ್ರಾಬಾದ್ ತಂಡ ಗಿರಗಿರ – 86 ರನ್‌ಗೆ ಸನ್‌ರೈಸರ್ಸ್ ಸರ್ವಪತನ
ಪ್ರಸ್ತುತ ಸೀಸನ್ ನಲ್ಲಿ 11 ಪಂದ್ಯಗಳನ್ನ ಆಡಿ 7 ಪಂದ್ಯಗಳನ್ನ ಗೆದ್ದಿರೋ ಬೆಂಗಳೂರು ತಂಡ ಸದ್ಯ ಟಾಪ್-2 ಟಾರ್ಗೆಟ್ ನಲ್ಲಿದೆ. ಮತ್ತೊಂದೆಡೆ ಸತತ 4 ಪಂದ್ಯಗಳನ್ನ ಗೆದ್ದಿರೋ ಕೆಕೆಆರ್ ಟಾಪ್-4 ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಎರಡೂ ತಂಡಗಳಿಗೆ ಈ ಪಂದ್ಯ ಮುಖ್ಯವಾಗುತ್ತೆ. ಅದೂ ಅಲ್ದೇ ಕೊಲ್ಕತ್ತಾ ಇವತ್ತಿನ ಪಂದ್ಯದಲ್ಲಿ ಸೋತ್ರೆ ಪ್ಲೇ ಆಫ್ಸ್ ಕನಸು ನನಸಾಗೋದು ಅನುಮಾನವಾಗುತ್ತೆ. ಹೀಗಾಗಿ ಶತಾಯ ಗತಾಯ ಈ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದೂ ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಈ ಪಂದ್ಯ ಸ್ಪೆಷಲ್ ಕೂಡ ಇದೆ. ಯಾಕಂದ್ರೆ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಇದೇ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ವು. ಅಂದು ಶುರುವಾದ ಉಭಯ ತಂಡಗಳ ಪೈಪೋಟಿ 19ನೇ ಸೀಸನ್ನಲ್ಲೂ ಮುಂದುವರೆದಿದೆ. ಈ ಪೈಪೋಟಿಯನ್ನು ಎಲ್ ಪ್ರಿಮೆರೊ ಎಂದು ಕರೆಯಲಾಗುತ್ತಿದೆ. ಎಲ್ ಪ್ರಿಮೆರೊ (El Primero) ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಮೊದಲನೆಯದು ಎಂದರ್ಥ. ಐಪಿಎಲ್ ಇತಿಹಾಸದ ಮೊಟ್ಟಮೊದಲ ಪಂದ್ಯ ಇದಾದ ಕಾರಣ ಇದಕ್ಕೆ ಈ ಹೆಸರು ಬಂದಿದೆ.
ಕೆಕೆಆರ್ ಮತ್ತು ಆರ್ ಸಿಬಿ ನಡುವಿನ ಪೈಪೋಟಿ ಕೂಡ ಅಷ್ಟೇ ಮುಖ್ಯವಾಗಿದೆ. ಉಭಯ ತಂಡಗಳು ಈವರೆಗೆ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 20 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದರೆ, 15 ಮ್ಯಾಚ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಅಂದರೆ ಉಭಯ ತಂಡಗಳ ತಂಡಗಳ ನಡುವೆ ರಣರೋಚಕ ಕಾದಾಟ ನಡೆದಿರುವುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಇನ್ನೊಂದು ವಿಚಾರ ಅಂದ್ರೆ ಎರಡೂ ತಂಡಗಳು ಪರಸ್ಫರ 200+ ಸ್ಕೋರ್ಗಳಿಸಿದೆ. ಹಾಗೆಯೇ ಉಭಯ ತಂಡಗಳು 100 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಆರ್ಸಿಬಿ ಕೆಕೆಆರ್ ವಿರುದ್ಧ ಕೇವಲ 49 ರನ್ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ. ಕೆಕೆಆರ್ ತಂಡವು ಆರ್ಸಿಬಿ ವಿರುದ್ಧ 84 ರನ್ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.
ಕೊಲ್ಕತ್ತಾ ವಿರುದ್ಧ ಆಡ್ತಾರಾ ಫಿಲ್ ಸಾಲ್ಟ್?
ಸದ್ಯ ಈ ಪಂದ್ಯಕ್ಕೂ ಮುನ್ನ ಆರ್ ಸಿಬಿ ಅಭಿಮಾನಿಗಳನ್ನು ಕಾಡುತ್ತಿರೋ ಪ್ರಶ್ನೆ ಇದೇ. ಗಾಯದ ಕಾರಣ ಇಂಗ್ಲೆಂಡ್ಗೆ ತೆರಳಿದ್ದ ಫಿಲ್ ಸಾಲ್ಟ್ ಭಾರತಕ್ಕೆ ಮರಳಿದ್ದಾರೆ. ಅಲ್ಲದೆ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿಯೇ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಾಲ್ಟ್ ಆರ್ಸಿಬಿ ಪರ ಮತ್ತೆ ಇನಿಂಗ್ಸ್ ಆರಂಭಿಸಲಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಮಂಗಳವಾರ ನಡೆದ ಆರ್ಸಿಬಿ ತಂಡದ ಅಭ್ಯಾಸದ ವೇಳೆ ಫಿಲ್ ಸಾಲ್ಟ್ ಕಾಣಿಸಿಕೊಂಡಿಲ್ಲ. ಹೀಗಾಗಿ ಕೊಲ್ಲತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸಾಲ್ಟ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಬೆರಳಿಗೆ ಆದ ಗಾಯ ಸಂಪೂರ್ಣ ಗುಣವಾಗಿಲ್ಲ. ಹೀಗಾಗಿ ವೈದ್ಯರು ಕೆಲ ದಿನಗಳ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ರಾಯ್ಪುರ್ನಲ್ಲಿ ನಡೆದ ಆರ್ಸಿಬಿ ತಂಡದ ಅಭ್ಯಾಸಕ್ಕೆ ಫಿಲ್ ಸಾಲ್ಟ್ ಗೈರಾಗಿದ್ದಾರೆ. ಫಿಲ್ ಸಾಲ್ಟ್ ಹೊರಗುಳಿಯುತ್ತಿರುವ ಕಾರಣ ಆರ್ಸಿಬಿ ಪರ ವಿರಾಟ್ ಕೊಹ್ಲಿ ಜೊತೆ ಯುವ ಎಡಗೈ ದಾಂಡಿಗ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಲಿದ್ದಾರೆ.

ನೋಡಿರಿ

