ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ಕ್ರಾಂತಿ! – ಬೆಂಗಳೂರು ಉಪ ನಗರ ರೈಲು ಯೋಜನೆಗೆ 153 ಎಸಿ ಬೋಗಿ ಪೂರೈಕೆಗೆ ಐಸಿಎಫ್‌ ಗ್ರೀನ್‌ ಸಿಗ್ನಲ್‌!

ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ಕ್ರಾಂತಿ! – ಬೆಂಗಳೂರು ಉಪ ನಗರ ರೈಲು ಯೋಜನೆಗೆ 153 ಎಸಿ ಬೋಗಿ ಪೂರೈಕೆಗೆ ಐಸಿಎಫ್‌ ಗ್ರೀನ್‌ ಸಿಗ್ನಲ್‌!

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಸಹಾಯವಾಗುವ ಜೊತೆಗೆ ಉತ್ತಮ ನಗರ ಸಾರಿಗೆ ಸೇವೆ ನೀಡುವ ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ (BSRP) ಮತ್ತಷ್ಟು ಬೆಳವಣಿಗೆ ಆಗಿದೆ. ಕಾರಿಡಾರ್ ನಿರ್ಮಾಣಗಳಿಗೆ ವೇಗ ನೀಡುವ ಜೊತೆಗೆ ಮೆಟ್ರೋ ಮಾದರಿಯ ರೈಲುಗಳ ಖರೀದಿಗೆ ಮುಂದಾಗಿದ್ದರ ಬಗ್ಗೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಅಧಿಕೃತ ಮಾಹಿತಿ ನೀಡಿದೆ.

ಇದನ್ನೂ ಓದಿ: ಆಹಾ.. ಜ್ಯೂಸ್‌ ಎಂದು ಕುಡಿಯೋ ಮುನ್ನ ಎಚ್ಚರ! – ಥಮ್ಸ್ ಅಪ್ ಸಾಫ್ಟ್ ಡ್ರಿಂಕ್‌ನಲ್ಲಿ ಸತ್ತ ಹಲ್ಲಿ ಪತ್ತೆ!  

ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಗಾಗಿ 153 ಹವಾನಿಯಂತ್ರಿತ ಬ್ರಾಡ್-ಗೇಜ್ ಮೆಟ್ರೋ-ಮಾದರಿಯ ಬೋಗಿಗಳ ಖರೀದಿಗಾಗಿ 1,513.75 ಕೋಟಿ ರೂ.ಮೊತ್ತದ ವರ್ಕ್ ಆರ್ಡರ್ ನ್ನು ಯೋಜನೆ ಅನುಷ್ಟಾನಗೊಳಿಸುತ್ತಿರುವ ಕೆ-ರೈಡ್‌ನ ಅಂಗಸಂಸ್ಥೆಯಾದ Bi-RIDE ನೀಡಿದೆ. ಮುಂದಿನ 18 ತಿಂಗಳೊಳಗೆ ಬೋಗಿಗಳ ಪೂರೈಕೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಕಾರಿಡಾರ್ -2 ರ ಅಡಿಯಲ್ಲಿ ಚಿಕ್ಕಬಾಣಾವರ-ಯಶವಂತಪುರ ವಿಭಾಗದ ಉದ್ಘಾಟನೆ ದಿನಕ್ಕೆ ಅನುಕೂಲವಾಗುವಂತೆ ಬೋಗಿಗಳನ್ನು ಪೂರೈಸುವಂತೆ ಸೂಚಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಪ್ರಧಾನಿಯವರ ‘ಪ್ರಗತಿ’ ಪರಿಶೀಲನಾ ಸಭೆಯಲ್ಲಿ ಹೊರಡಿಸಲಾದ ನಿರ್ದೇಶನಗಳೊಂದಿಗೆ ಸಮಯ ನಿಗದಿಪಡಿಸಲಾಗಿದೆ.

ಈ ಒಪ್ಪಂದ ಬೋಗಿಗಳ ವಿನ್ಯಾಸ, ಉತ್ಪಾದನೆ, ಪರಿಶೀಲನೆ, ಪರೀಕ್ಷೆ, ಏಕೀಕರಣ ಮತ್ತು ಕಾರ್ಯಾರಂಭವನ್ನು ಒಳಗೊಂಡಿದೆ. ರೈಲುಗಳ ಬ್ರೇಕ್‌ಗಳು, ಚಕ್ರಗಳು, ಮತ್ತು ಬೋಗಿಗಳ ಸ್ಥಿತಿಯನ್ನು ಪರಿಶೀಲಿಸುವ ರೋಲಿಂಗ್ ಸ್ಟಾಕ್ ಪರೀಕ್ಷೆ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ICF ಹೊಂದಿದೆ.

ಈ ಕುರಿತು ಮಾಹಿತಿ ನೀಡಿದ ಕೆ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಲಕ್ಷ್ಮಣ್ ಸಿಂಗ್, ಈ ವರ್ಕ್ ಆರ್ಡರ್ ಯೋಜನೆಗೆ ಒಂದು ಮೈಲಿಗಲ್ಲು. ಐಸಿಎಫ್‌ನೊಂದಿಗಿನ ಈ ಪಾಲುದಾರಿಕೆಯ ಮೂಲಕ, ಕಾರಿಡಾರ್‌ಗಳು 2 ಮತ್ತು 4 ಗಾಗಿ ಟ್ರ್ಯಾಕ್ ಮತ್ತು ಸಿಸ್ಟಮ್ಸ್ ಮೂಲಸೌಕರ್ಯ ಕೆಲಸ ಪೂರ್ಣಗೊಳ್ಳುವ ಹೊತ್ತಿಗೆ ಅಗತ್ಯವಿರುವ ರೈಲು ಬೋಗಿಗಳು ಲಭ್ಯವಿರುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಎಂದರು.

ಬೋಗಿಗಳ ಖರೀದಿಗೆ ವರ್ಕ್ ಆರ್ಡರ್ ನಿಂದ ಬೆಂಗಳೂರಿನ ನಾಗರಿಕರಿಗೆ ಯಾವುದೇ ವಿಳಂಬವಿಲ್ಲದೆ ವಿಶ್ವ ದರ್ಜೆಯ ಉಪನಗರ ರೈಲು ಯೋಜನೆ ಅನುಷ್ಟಾನಕ್ಕೆ ನೆರವಾಗಲಿದೆ. ಈ ಯೋಜನೆ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಕೆ-ರೈಡ್ ಮತ್ತು ಐಸಿಎಫ್ ನಡುವೆ ಅಧಿಕೃತ ತಿಳುವಳಿಕೆ ಒಪ್ಪಂದ (ಎಂಒಯು) ಶೀಘ್ರದಲ್ಲೇ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *