ಶೃಂಗೇರಿಯಲ್ಲಿ ರಾಜೇಗೌಡರ ನಾಮಫಲಕಕ್ಕೆ ಹಾಲಿನ ಅಭಿಷೇಕ – ಒಳ್ಳೆಯದಾಗುವ ವಿಶ್ವಾಸವಿದೆ ಎಂದ ಜೀವರಾಜ್!

ಶೃಂಗೇರಿಯಲ್ಲಿ ರಾಜೇಗೌಡರ ನಾಮಫಲಕಕ್ಕೆ ಹಾಲಿನ ಅಭಿಷೇಕ – ಒಳ್ಳೆಯದಾಗುವ ವಿಶ್ವಾಸವಿದೆ ಎಂದ ಜೀವರಾಜ್!

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರದಲ್ಲಿ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮತ ಮರು ಎಣಿಕೆಯಲ್ಲಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್‌ ಅವರಿಗೆ ಸುಪ್ರೀಂಕೋರ್ಟ್‌ ಶಾಕ್‌ ನೀಡಿದೆ. ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಅಂಚೆ ಮತಗಳ ಮರುಎಣಿಕೆಯಲ್ಲಿ ರೋಚಕ ಗೆಲುವು ಸಾಧಿಸಿ ಕಳೆದ ಬುಧವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿ ನಾಯಕ ಡಿ ಎನ್ ಜೀವರಾಜ್ ಈಗ ಮತ್ತೆ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರಶ್ನೆ ಪತ್ರಿಕೆ ಸೋರಿಕೆ.. ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!  

ಶೃಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು ರಾಜೇಗೌಡರ ನಾಮಫಲಕಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಮತ್ತೊಂದೆಡೆ ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಜೀವರಾಜ್, ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಪ್ರಕರಣದ ಬಗ್ಗೆ ಅವಲೋಕಿಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ ಮತ್ತು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ನಿಗದಿಪಡಿಸಿದೆ. ಇದು ಕೇವಲ ಮಧ್ಯಂತರ ಆದೇಶವಾಗಿದ್ದು, ಅಂತಿಮ ತೀರ್ಪಲ್ಲ. ತಡೆಯಾಜ್ಞೆ ನೀಡಿದ ಕಾರಣ, ಹಾಲಿ ಶಾಸಕರೇ ಮುಂದುವರಿಯಲಿದ್ದಾರೆ. ರಾಜಕೀಯದಲ್ಲಿ ಗೆಲುವು-ಸೋಲು ಸಾಮಾನ್ಯ. ಕೋರ್ಟ್ ಆದೇಶವನ್ನು ಎದುರು ನೋಡುತ್ತಿದ್ದೇನೆ ಮತ್ತು ಅಕ್ಟೋಬರ್ 21ರ ನಂತರ ಒಳ್ಳೆಯದಾಗುವ ವಿಶ್ವಾಸವಿದೆ ಎಂದು ಜೀವರಾಜ್ ಹೇಳಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಫಲಿತಾಂಶ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ ಟಿ.ಡಿ ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮತಗಳ ಮರು ಎಣಿಕೆ ಫಲಿತಾಂಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್‌ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ. ಹೈಕೋರ್ಟ್‌ ಆದೇಶದ ಮೇರೆಗೆ ಮೇ 2ರಂದು ಅಂಚೆಮತಗಳ ಮರು ಎಣಿಕೆ ನಡೆದಿತ್ತು. ಅದರಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗಿಂತ 52 ಮತಗಳನ್ನ ಜಾಸ್ತಿ ಪಡೆದು ಗೆದ್ದಿದ್ದರು. ಅವರು ಹೀಗೆ ಗೆದ್ದಿದ್ದರೂ ಕೂಡ ಅದರ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಅಪಸ್ವರ ಎದ್ದಿತ್ತು. ಆದರೂ ಚುನಾವಣಾ ಆಯೋಗ ಜೀವರಾಜ್ ಅವರು ಅಂಚೆ ಮತಗಳ ಮರು ಮತ ಎಣಿಕೆಯಲ್ಲಿಗೆದ್ದಿದ್ದಾರೆಂದು ಘೋಷಿಸಿ ಪ್ರಮಾಣ ಪತ್ರವನ್ನು ನೀಡಿತ್ತು.

2023ರ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ 689 ಅಂಚೆ ಮತಗಳು ಲಭಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 562 ಮತಗಳು ಬಂದಿದ್ದವು ಮತ್ತು 279 ಮತಗಳು ಅಂದೇ ತಿರಸ್ಕೃತಗೊಂಡಿದ್ದವು. ಆದರೆ, 2026ರ ಮರುಎಣಿಕೆಯಲ್ಲಿ 257 ಮತಗಳು ಅಮಾನ್ಯಗೊಂಡಿವೆ. ಇದರಲ್ಲಿ ಗಮನಾರ್ಹ ಅಂಶವೆಂದರೆ, ರದ್ದಾದ 257 ಮತಗಳಲ್ಲಿ 255 ಮತಗಳು ಕಾಂಗ್ರೆಸ್ ಅಭ್ಯರ್ಥಿಯದ್ದೇ ಆಗಿದೆ! ಅಂದು ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿದ್ದು ಹೇಗೆ? ಎನ್ನುವುದು ಪ್ರಶ್ನೆಯಾಗಿದೆ. 2023ರಲ್ಲಿ 201 ಮತಗಳ ಅಂತರದಿಂದ ಗೆದ್ದಿದ್ದ ಕಾಂಗ್ರೆಸ್‌ನ ರಾಜೇಗೌಡು, 2026ರ ಮರು ಎಣಿಕೆಯಲ್ಲಿ 52 ಮತಗಳ ಅಂತರದಿಂದ ಸೋತಿದ್ದರು. ಅದಕ್ಕೆ ಕಾರಣ ಅಮಾನ್ಯವಾದ ಮತಗಳೇ ಆಗಿದ್ದವು. ರಾಜೇಗೌಡರು ಇದೇ ವಿಷಯ ಇಟ್ಟುಕೊಂಡು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಕಳೆದ ಬಾರಿ ಮಾನ್ಯವಾಗಿದ್ದ 255 ಮತಗಳು ಈ ಬಾರಿ ಅಮಾನ್ಯವಾಗಿದ್ದು ಹೇಗೆ ಎಂದು ಅವರು ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ರಾಜೇಗೌಡರ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ಸದ್ಯ ಜೀವರಾಜ್‌ ಶಾಸಕ ಸ್ಥಾನಕ್ಕೆ ತಡೆಯಾಜ್ಞೆ ನೀಡಿದೆ.

Shantha Kumari

Leave a Reply

Your email address will not be published. Required fields are marked *