ಕಲ್ಲಂಗಡಿ ಸೇವಿಸಿದ ಬಾಲಕ ದುರಂತ ಅಂತ್ಯ! – ಮೂವರು ಮಕ್ಕಳ ಸ್ಥಿತಿ ಗಂಭೀರ!

ಕಲ್ಲಂಗಡಿ ಸೇವನೆ ಆರೋಗ್ಯಕ್ಕೆ ಉತ್ತಮ. ಬೇಸಿಗೆಗಾಲದಲ್ಲಿ ಈ ಹಣ್ಣು ಸೇವನೆಯಿಂದ ಸಾಕಷ್ಟು ಆರೋಗ್ಯ ಲಾಭಗಳಿವೆ. ಆದ್ರೀಗ ಆರೋಗ್ಯ ವೃದ್ಧಿಗೊಳಿಸುವ ಹಣ್ಣೇ ಜನರ ಜೀವಕ್ಕೆ ಕಂಟಕವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕಲ್ಲಂಗಡಿ ಸೇವಿಸಿದ್ದ ಬಾಲಕ ಸಾವನ್ನಪ್ಪಿದ್ದು, ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ.. ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!
ಈ ಆತಂಕಕಾರಿ ಘಟನೆ ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ನಡೆದಿದೆ. ಮಕ್ಕಳು, ಸಂಬಂಧಿಕರೊಂದಿಗೆ ತಮ್ಮ ಮಾವನ ಮನೆಗೆ ಬಂದಿದ್ದರು ಎನ್ನಲಾಗಿದೆ. ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಒಬ್ಬ ಬಾಲಕ ಮೃತಪಟ್ಟಿದ್ದಾನೆ. ಮೃತನನ್ನು ಪೋಡಿ ದಲ್ಹಾ ಗ್ರಾಮದ ನಿವಾಸಿ ಅಖಿಲೇಶ್ ಧಿವರ್ (15) ಎಂದು ಗುರುತಿಸಲಾಗಿದ್ದು, ಅವರಿಡ್ ಗ್ರಾಮದ ಧಿವರ್ (4), ಖಟೋಲಾದಿಂದ ಪಿಂಟು ಧಿವರ್ (12) ಮತ್ತು ಕೊಟ್‌ಗಢದ ಹಿತೇಶ್ ಧಿವರ್ (13) ಅಸ್ವಸ್ಥಗೊಂಡ ಮಕ್ಕಳು.
ಅಷ್ಟಕ್ಕೂ ಆಗಿದ್ದೇನು?
ಭಾನುವಾರ (ಮೇ 10) ಸಂಜೆ ಮಕ್ಕಳು ಮನೆಯಲ್ಲಿ ಇಟ್ಟಿದ್ದ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದಾರೆ. ಕೆಲವು ಗಂಟೆಗಳ ನಂತರ, ಅಖಿಲೇಶ್‍ಗೆ ವಾಂತಿ, ಅತಿಸಾರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ನಂತರ ಇತರ ಮೂವರು ಮಕ್ಕಳಲ್ಲಿಯೂ ಇದೇ ರೀತಿಯ ಲಕ್ಷಣಗಳು ಕಂಡುಬಂದವು. ಮಕ್ಕಳ ಸ್ಥಿತಿ ಹದಗೆಟ್ಟಿದ್ದರಿಂದ, ಕುಟುಂಬ ಸದಸ್ಯರು ಸೋಮವಾರ (ಮೇ 11) ಆಂಬ್ಯುಲೆನ್ಸ್‌ಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಬಾಲಕ ಅಖಿಲೇಶ್ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಇತರ ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಬಾಲಕ ಸಾವಿಗೆ ಕಲ್ಲಂಗಡಿ ಕಾರಣ?
ಕಲ್ಲಂಗಡಿ ಹಣ್ಣನ್ನು ಬೆಳಿಗ್ಗೆ ಕತ್ತರಿಸಿ ಹಲವಾರು ಗಂಟೆಗಳ ನಂತರ ಸೇವಿಸಲಾಗಿದೆ ಎಂದು ವರದಿಯಾಗಿದೆ. ಇದು ಮಾಲಿನ್ಯ ಉಂಟಾಗಿರುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಡಾ. ಕುಜೂರ್ ಹೇಳಿದರು. ಕಲುಷಿತ ಕಲ್ಲಂಗಡಿ ಸೇವನೆಯಿಂದಾಗಿ ಮಕ್ಕಳು ತಿಂದ ಹಣ್ಣು ವಿಷವಾಗಿ ಬದಲಾಗಿರಬಹುದು ಎನ್ನಲಾಗಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಮನೆಯಲ್ಲಿ ಇರಿಸಲಾದ ಮತ್ತೊಂದು ಕಲ್ಲಂಗಡಿ ಹಣ್ಣನ್ನು ಪ್ರಯೋಗಾಲಯ ಪರೀಕ್ಷೆಗಾಗಿ ಆಹಾರ ಸುರಕ್ಷತಾ ಇಲಾಖೆಗೆ ಕಳುಹಿಸಲಾಗಿದೆ ಎಂದು ಕುಜೂರ್ ಹೇಳಿದರು. ವಿಧಿವಿಜ್ಞಾನ ಮತ್ತು ಆಹಾರ ಸುರಕ್ಷತಾ ವರದಿಗಳು ಬಂದ ನಂತರವೇ ಘಟನೆಗೆ ಕಾರಣವೇನೆಂದು ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಡಿರಿ

