ಪಂಚಭೂತಗಳಲ್ಲಿ ಲೀನರಾದ ಸಚಿವ ಡಿ.ಸುಧಾಕರ್ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಪಂಚಭೂತಗಳಲ್ಲಿ ಲೀನರಾದ ಸಚಿವ ಡಿ.ಸುಧಾಕರ್ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (65) ನಿನ್ನೆ ಮುಂಜಾನೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿದೆ.

ಇದನ್ನೂ ಓದಿ: ಕೃನಾಲ್‌ ಪಾಂಡ್ಯ ಅಲ್ಲೇ ಬಿದ್ದು ಸಾಯಬೇಕಿತ್ತು! – ಆಟಗಾರನಾಗಿ ಮಾನವೀಯತೆ ಮರೆತ CSK ಮಾಜಿ ಪ್ಲೇಯರ್!

65 ವರ್ಷದ ಸಚಿವ ಸುಧಾಕರ್ ಅವರಿಗೆ ಮೊದಲು ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸರ್ಜರಿ ಬಳಿಕ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾರಕರ್ ನಿನ್ನೆ (ಮೇ 10) ಬೆಳಗ್ಗೆ ಮೃತಪಟ್ಟಿದ್ದರು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಚಳ್ಳಕೆರೆಯ ಚಿತಾಗಾರದಲ್ಲಿ ಹಿರಿಯೂರು ಶಾಸಕ, ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ನೆರವೇರಿದೆ.

ಅಂತ್ಯಕ್ರಿಯೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಉಸ್ತುವಾರಿ ಸಚಿವ ಸುರ್ಜೇವಾಲಾ, ಸಚಿವರು, ಶಾಸಕರು, ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಸುಧಾಕರ್ ಪಾರ್ಥಿವ ಶರೀರ ನೋಡಿ ಡಿಕೆಶಿ ಕಣ್ಣೀರಾದರು. ಬೆಳಗ್ಗೆಯಿಂದ ಸುಧಾಕರ್ ಅವರ ನಿವಾಸದಲ್ಲಿ ಹಲವರು ಅಂತಿಮ ದರ್ಶನ ಪಡೆದರು. ಬಳಿಕ ಸುಧಾಕರ್ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ಸುಧಾಕರ್ ಸ್ಟೇಡಿಯಂನಿಂದ ಜೈನ ಮುಕ್ತಿಧಾಮವರೆಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.

ನಂತರ ಮುಕ್ತಿಧಾಮದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಬಂದೂಕು ಪಡೆ ಗೌರವ ಸಲ್ಲಿಸಿತು. ಬಳಿಕ ಪಾರ್ಥಿವ ಶರೀರದ ಮೇಲಿನ ರಾಷ್ಟ್ರಧ್ವಜವನ್ನು ತೆರವುಗೊಳಿಸಿ, ಸುಧಾಕರ್‌ ಪತ್ನಿ ಹರ್ಷಿಣಿ ಅವರಿಗೆ ಸಿಎಂ ಸಿದ್ದರಾಮಯ್ಯ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಸುಧಾಕರ್ ಪುತ್ರ ಸುಹಾಸ್‌ ಅಂತಿಮ ವಿಧಿ ವಿಧಾನ ಕಾರ್ಯ ನೆರವೇರಿಸಿ, ಪಾರ್ಥಿವ ಶರೀರಕ್ಕೆ ಸುಗಂಧ ದ್ರವ್ಯಗಳಿಂದ ಅಗ್ನಿಸ್ಪರ್ಶ ಮಾಡಲಾಯಿತು. ಸಕಲ ಸರ್ಕಾರಿ ಗೌರವ, ಜೈನ ಸಂಪ್ರದಾಯದಂತೆ ಸಚಿವ ಡಿ.ಸುಧಾಕರ್ ಪಂಚಭೂತಗಳಲ್ಲಿ ಲೀನರಾದರು.

Shwetha M

Leave a Reply

Your email address will not be published. Required fields are marked *