ಸಚಿವ ಸ್ಥಾನ ಕೊಡಿ.. ಜೊತೆಗೆ ಡಿಸಿಎಂ ಹುದ್ದೆ ನೀಡಿ – ವಿಸಿಕೆ ಡಿಮ್ಯಾಂಡ್ ಗೆ ಟಿವಿಕೆ ಸರ್ಕಾರ ರಚನೆ ಕನಸು ಕಗ್ಗಂಟು!

ಸಚಿವ ಸ್ಥಾನ ಕೊಡಿ.. ಜೊತೆಗೆ ಡಿಸಿಎಂ ಹುದ್ದೆ ನೀಡಿ – ವಿಸಿಕೆ ಡಿಮ್ಯಾಂಡ್ ಗೆ ಟಿವಿಕೆ ಸರ್ಕಾರ ರಚನೆ ಕನಸು ಕಗ್ಗಂಟು!

ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದು ದಿನಗಳು ಕಳೆಯುತ್ತಿದ್ರೂ ತಮಿಳುನಾಡಿನಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಅನ್ನೋದೇ ಯಕ್ಷಪ್ರಶ್ನೆಯಾಗಿದೆ. ಯಾಕಂದ್ರೆ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಕೂಡ ಸ್ಪಷ್ಟಬಹುಮತವಿಲ್ಲದೆ ಹಿನ್ನಡೆ ಅನುಭವಿಸಿದೆ. ಹಾಗೆ ಇತತರ ಸಹಾಯ ಕೇಳಿದೆಯಾದ್ರೂ ಬೇಡಿಕೆಗಳನ್ನ ಈಡೇರಿಸುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಟಿವಿಕೆ ಪಕ್ಷದ ಸರ್ಕಾರ ರಚನೆ ವಿಚಾರ ದಿನೇದಿನೆ ಕಗ್ಗಂಟಾಗುತ್ತಿದೆ.

ಇದನ್ನೂ ಓದಿ : ಕಲ್ಪತರು ನಾಡಿನಲ್ಲಿ ಮುಂದುವರೆದ ನವಿಲುಗಳ ಸರಣಿ ಸಾವು! – 1 ತಿಂಗಳಲ್ಲಿ 60 ನವಿಲುಗಳು ಹಕ್ಕಿ ಜ್ವರಕ್ಕೆ ಬಲಿ!

ದೇಶದ ರಾಜಕಾರಣದಲ್ಲಿ ಅಚ್ಚರಿ ಎನ್ನುವಂತೆ ಟಿವಿಕೆ ಪಕ್ಷ ಮೊದಲ ಚುನಾವಣೆಯಲ್ಲೇ ಬರೋಬ್ಬರಿ 108 ಸ್ಥಾನಗಳನ್ನು ಪಡೆದಿದೆ. ಆದರೆ ಸ್ಪಷ್ಟ ಬಹುಮತ ಸಿಗದ ಕಾರಣಕ್ಕೆ ಸಣ್ಣ ಪುಟ್ಟ ಪಕ್ಷಗಳ ಬಳಿಯೂ ಅಂಗಲಾಚುವಂತಾಗಿದೆ. ಒಟ್ಟು 108 ಸ್ಥಾನಗಳನ್ನು ಚುನಾವಣೆಯಲ್ಲಿ ಗೆದ್ದರೂ ಕೂಡ ವಿಜಯ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರಿಂದಾಗಿ ಟಿವಿಕೆ ಬಳಿ ಈಗಿರುವ ಸಂಖ್ಯೆ 107. ಇದರ ಜೊತೆ ಕಾಂಗ್ರೆಸ್​ನ 5, ಸಿಪಿಐನ 2, ಸಿಪಿಎಂನ 2 ಸ್ಥಾನಗಳು ಸೇರಿ ವಿಜಯ್ ಅವರಿಗೆ ಇರುವ ಸಂಖ್ಯೆ 116 ಆಗಿದೆ. ಆದರೆ, ಸರ್ಕಾರ ರಚನೆಗೆ ವಿಜಯ್​ಗೆ 118 ಸ್ಥಾನಗಳು ಬೇಕಾಗಿವೆ. ಒಂದುವೇಳೆ ವಿಸಿಕೆ ತನ್ನ ಬಳಿ ಇರುವ ಇಬ್ಬರು ಶಾಸಕರ ಬೆಂಬಲ ಘೋಷಿಸಿದರೆ ಮಾತ್ರ ವಿಜಯ್ ಮುಖ್ಯಮಂತ್ರಿಯಾಗಲು ಸಾಧ್ಯ. ಆದರೆ ವಿಸಿಕೆ  ಭರ್ಜರಿ ಬೇಡಿಕೆಗಳನ್ನು ಇಡೋ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿದೆ.

ಸಚಿವ ಸ್ಥಾನದ ಜೊತೆ ಡಿಸಿಎಂ ಹುದ್ದೆ ಬೇಡಿಕೆ ಇಟ್ಟ ವಿಸಿಕೆ!

ಇರೋದು 2 ಸ್ಥಾನಗಳೇ ಆದರೂ ವಿಸಿಕೆ ಆಟ ಜೋರಾಗಿದೆ. ಒಂದು, ಡಿಸಿಎಂ (ಉಪ ಮುಖ್ಯಮಂತ್ರಿ) ಹುದ್ದೆ ನೀಡಬೇಕು. ವಿಸಿಕೆ ಪಕ್ಷ ನಟ ವಿಜಯ್​ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಿದ್ರೆ, ಡಿಸಿಎಂ ಸ್ಥಾನ ನೀಡಬೇಕು ಎಂದು ಕಂಡಿಷನ್​ ಹಾಕಿದ್ದಾರೆ. ಅಲ್ಲದೇ ಮತ್ತೊಂದು ಕಂಡೀಷನ್​ ಎಂದರೆ ಎರಡನೇದು, ಪೆರಂಬೂರು ಕ್ಷೇತ್ರವನ್ನು ಅವರ ಪಕ್ಷಕ್ಕೆ ಬಿಡಬೇಕೆಂಬುದು. ನಟ ವಿಜಯ್​ ಗೆದ್ದಿರುವ ಪೆರಂಬೂರು ಕ್ಷೇತ್ರವನ್ನು ಬಿಡಬೇಕು ಎಂದು ವಿಸಿಕೆ ಡಿಮ್ಯಾಂಡ್​ ಇಟ್ಟಿದೆ ಎಂದು ತಿಳಿದುಬಂದಿದೆ. ವಿಜಯ್ ರಾಜೀನಾಮೆಯಿಂದ ತೆರವಾಗುವ ಕ್ಷೇತ್ರವನ್ನು ವಿಸಿಕೆ ತಮ್ಮದಾಗಿಸಿಕೊಳ್ಳಲು ಬಲವಾಗಿ ಒತ್ತಾಯಿಸುತ್ತಿದೆ. ಪೆರಂಬೂರು ಕ್ಷೇತ್ರವನ್ನು ಬಿಡದೇ ಇದ್ದರೆ ಬೆಂಬಲ ನೀಡುವುದಿಲ್ಲ ಎಂಬ ಮಟ್ಟಿಗೆ ವಿಸಿಕೆ ಶಾಸಕರು ಪಟ್ಟು ಹಿಡಿದಿದ್ದಾರೆ. ಇದರಿಂದ ನಟ ವಿಜಯ್ ಅವರ ಮೇಲೆ ರಾಜಕೀಯ ಒತ್ತಡ ಹೆಚ್ಚಾಗಿದೆ. ಒಂದು ಕಡೆ ತಮ್ಮ ಪಕ್ಷದ ವಿಸ್ತರಣೆ, ಮತ್ತೊಂದು ಕಡೆ ಮೈತ್ರಿ ರಾಜಕೀಯದ ಒತ್ತಡ ಇವುಗಳ ನಡುವೆ ಅವರು ಸಿಲುಕಿಕೊಂಡಿದ್ದಾರೆ.

ರಾಜ್ಯಪಾಲರು ಸರ್ಕಾರ ರಚನೆಗೆ ಬಹುಮತ ಕೊರತೆ ಕಾರಣ ನೀಡಿ ಅನುಮತಿ ನೀಡುತ್ತಿಲ್ಲ. ಹಾಗೇ ನಿನ್ನೆ ವಿಜಯ್ ಅವರಿಗೆ ವಿಸಿಕೆ ಜೊತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಬೆಂಬಲ ಘೋಷಿಸಿದ್ದರಿಂದ ಬಹುಮತದ ಬಗ್ಗೆ ತಲೆಬಿಸಿ ಇರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಮುಸ್ಲಿಂ ಲೀಗ್ ತಾನು ಡಿಎಂಕೆ ನೇತೃತ್ವದ ಮೈತ್ರಿಕೂಟದ ಜೊತೆಯೇ ಇರುತ್ತೇನೆ ಎಂದು ಘೋಷಿಸುವ ಮೂಲಕ ಟಿವಿಕೆಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು. ಇತ್ತ ವಿಸಿಕೆ ಕೂಡ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಆಡುತ್ತಿದೆ. ಹೀಗಾಗಿ ಹೆಚ್ಚಿನ ಸ್ಥಾನಗಳನ್ನ ಪಡೆದರೂ ಕೂಡ ಟಿವಿಕೆ ಪಕ್ಷದ ವಿಜಯ್ ಗೆ ನಿದ್ದೆ ಇಲ್ಲದಂತಾಗಿದೆ.

Shantha Kumari

Leave a Reply

Your email address will not be published. Required fields are marked *