ಜೇನುತುಪ್ಪ ತೆಗೆಯಲು ಹೋದ ಬಾಲಕ ಬಂಡೆಗಳ ಮಧ್ಯೆ 12 ಗಂಟೆ ಲಾಕ್!‌ – ಡೇಂಜರಸ್‌ ಜಾಗದಿಂದ ಬಚಾವ್‌ ಆಗಿದ್ದು ಹೇಗೆ?

ಜೇನುತುಪ್ಪ ತೆಗೆಯಲು ಹೋದ ಬಾಲಕ ಬಂಡೆಗಳ ಮಧ್ಯೆ 12 ಗಂಟೆ ಲಾಕ್!‌ – ಡೇಂಜರಸ್‌ ಜಾಗದಿಂದ ಬಚಾವ್‌ ಆಗಿದ್ದು ಹೇಗೆ?

ಜೀನುತುಪ್ಪ ಸಂಗ್ರಹಿಸಲು ಹೋಗಿದ್ದ ಬಾಲಕ ಬಂಡೆಕಲ್ಲಿನ ಮಧ್ಯೆ ಸಿಲುಕಿರುವ ಘಟನೆ ನಡೆದಿದೆ. ಸುಮಾರು 12 ಗಂಟೆ ಬಳಿಕ ಆತ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಸತತ 7 ಗಂಟೆಗ ಕಾಲ ಕಾರ್ಯಾಚರಣೆ ನಡೆಸಿ ಆತನನ್ನ ರಕ್ಷಿಸಲಾಗಿದೆ.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆ! – ಊಟ ಸೇವಿಸಿದ ನೂರಾರು ಮಕ್ಕಳು ಅಸ್ವಸ್ಥ!

ಈ ಘಟನೆ ಒಡಿಶಾದ ನಯಾಗಢ ಜಿಲ್ಲೆಯ ಕಾನಿಪಾದಲ್ಲಿ ನಡೆದಿದೆ. 14 ವರ್ಷದ ಬಾಲಕ  ಕಾಡಿಗೆ ಜೇನುತುಪ್ಪ ಸಂಗ್ರಹಿಸಲೆಂದು ಹೋಗಿದ್ದ. ಜೇನು ಸಂಗ್ರಹಿಸುವ ವೇಳೆ ದೊಡ್ಡ ಬಂಡೆಗಳ ನಡುವೆ ಜಾರಿ ಬಿದ್ದಿದ್ದ ಬಾಲಕನ ತಲೆ ಆಳವಾದ ಕಲ್ಲಿನ ಗುಂಡಿಯೊಳಗೆ ಬಿಗಿಯಾಗಿ ಸಿಲುಕಿಕೊಂಡಿತು. ಚಲಿಸಲು, ಬಿಡಿಸಿಕೊಳ್ಳಲು ಸಾಧ್ಯವಾಗದೆ ಇದ್ದುದರಿಂದ ಐದು ಗಂಟೆಗಳಿಗೂ ಹೆಚ್ಚು ಕಾಲ ಬಾಲಕ ಅದರಲ್ಲಿ ಸಿಲುಕಿಕೊಂಡಿದ್ದನು. ಸ್ಥಳೀಯರು ಪ್ರಯತ್ನಿಸಿ ಸಾಧ್ಯವಾಗದೇ ಇದ್ದಾಗ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಾಲಕ  ಬಂಡೆಗಳ ಮಧ್ಯೆ ಸಿಲುಕಿರುವ ವಿಚಾರ ತಿಳಿದ ಕೂಡಲೇ ಓಡಗಾಂವ್ ಮತ್ತು ನಾಯಗಢದ ಅಗ್ನಿಶಾಮಕ ಸೇವೆ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವು.

ಅಸ್ಥಿರವಾದ ಬಂಡೆಗಳು, ಅಸಮ ನೆಲ, ಬಂಡೆಗಳು ಕುಸಿಯುವ ಭೀತಿ, ವಿಷಪೂರಿತ ಹಾವುಗಳಿರುವ ಭಯದ ನಡುವೆ ಅಪಾಯಕಾರಿ ಪರಿಸ್ಥಿತಿಯ ನಡುವೆ ಬಾಲಕನಿಗೆ ಗಾಯವಾಗದಂತೆ ಎಚ್ಚರಿಕೆ ವಹಿಸಲು ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿತ್ತು. ಬಳಿಕ ಹೈಡ್ರಾಲಿಕ್ ಜ್ಯಾಕ್ ವ್ಯವಸ್ಥೆ ಮತ್ತು ವಿಶೇಷ ಯಂತ್ರೋಪಕರಣಗಳನ್ನು ಬಳಸಿ ಬಾಲಕನ ಸುತ್ತ ಇದ್ದ ಬಂಡೆಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಯ ಉದ್ದಕ್ಕೂ ರಕ್ಷಣಾ ತಂಡವು ಬಾಲಕ ಗಾಬರಿಯಾಗದಂತೆ ಶಾಂತವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಇರುವಂತೆ ನೋಡಿಕೊಂಡಿತ್ತು. ಸುಮಾರು ಏಳು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.

ಘಟನೆಯ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಅಗ್ನಿಶಾಮಕ ದಳ, ತುರ್ತು ಸೇವಾ ತಂಡಗಳನ್ನು ಶ್ಲಾಘಿಸಿದರು. ಬಾಲಕನ ಅಸಹಾಯಕ ಸ್ಥಿತಿಯಿಂದ ಬಾಲಕನನ್ನು ರಕ್ಷಿಸಿದ ಸಿಬ್ಬಂದಿಯ ಧೈರ್ಯ ಮತ್ತು ವೃತ್ತಿಪರ ಪರಿಣತಿಯನ್ನು ಅವರು ಮೆಚ್ಚಿ ಮಾಡಿರುವ ಪೋಸ್ಟ್ ಗೆ ಸಾಕಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Shwetha M