ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮುರಳಿ ವಿಜಯ್ ಗುಡ್ ಬೈ
ಟೀಮ್ ಇಂಡಿಯಾದ ಆಟಗಾರ ಮುರಳಿ ವಿಜಯ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವ ತಮಿಳುನಾಡು ಆಟಗಾರ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದು 2018 ರಲ್ಲಿ. ಅಂದು ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದಾದ ಬಳಿಕ ಅವರಿಗೆ ಮತ್ತೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ 5 ಕೋಟಿ ರೂಪಾಯಿ ಬಹುಮಾನ
ಟೀಮ್ ಇಂಡಿಯಾ ಪರ 61 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಮುರಳಿ ವಿಜಯ್ 40 ರ ಸರಾಸರಿಯಲ್ಲಿ 3880 ರನ್ ಗಳಿಸಿದ್ದಾರೆ. ಈ ವೇಳೆ 12 ಶತಕ ಹಾಗೂ 15 ಅರ್ಧಶತಕಗಳನ್ನು ಕೂಡ ಬಾರಿಸಿದ್ದರು. ಅಷ್ಟೇ ಅಲ್ಲದೆ ಭಾರತದ ಪರ 17 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿರುವ ಮುರಳಿ ವಿಜಯ್ ಕ್ರಮವಾಗಿ 339 ರನ್ ಹಾಗೂ 169 ರನ್ ಕಲೆಹಾಕಿದ್ದಾರೆ. ಇನ್ನು 2015 ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಸಿಮೀತ ಓವರ್ಗಳಲ್ಲಿ ಹಾಗೂ 2018 ರಲ್ಲಿ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ಮುರಳಿ ವಿಜಯ್ಗೆ ಮತ್ತೆ ಅವಕಾಶ ಸಿಕ್ಕಿರಲಿಲ್ಲ.
ಇದೀಗ ಟ್ವೀಟ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಮುರಳಿ ವಿಜಯ್, “ನನ್ನ ಎಲ್ಲಾ ತಂಡದ ಸಹ ಆಟಗಾರರು, ತರಬೇತುದಾರರು, ಮಾರ್ಗದರ್ಶಕರು ಮತ್ತು ಸಹಾಯಕ ಸಿಬ್ಬಂದಿಗೆ, ನಿಮ್ಮೆಲ್ಲರೊಂದಿಗೆ ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಅಂತರಾಷ್ಟ್ರೀಯ ಕ್ರೀಡೆಯ ಏರಿಳಿತಗಳ ಮೂಲಕ ನನ್ನನ್ನು ಬೆಂಬಲಿಸಿದ ಕ್ರಿಕೆಟ್ ಅಭಿಮಾನಿಗಳಿಗೆ, ನಾನು ನಿಮ್ಮೆಲ್ಲರೊಂದಿಗೆ ಕಳೆದ ಕ್ಷಣಗಳನ್ನು ಎಂದೆಂದಿಗೂ ಸ್ಮರಿಸುತ್ತೇನೆ. ನಿಮ್ಮ ಬೆಂಬಲ ಯಾವಾಗಲೂ ನನಗೆ ಪ್ರೇರಣೆಯಾಗಿದೆ. ಇನ್ಮುಂದೆ ವಿಶ್ವ ಕ್ರಿಕೆಟ್ನಲ್ಲಿ ಹೊಸ ಅವಕಾಶಗಳನ್ನು ಎದುರು ನೋಡುತ್ತೇನೆ. ಅಲ್ಲಿ ನನ್ನ ಕ್ರಿಕೆಟ್ ಮುಂದುವರೆಸಲು ಬಯಸುತ್ತೇನೆ” ಎಂದು ಮುರಳಿ ವಿಜಯ್ ತಿಳಿಸಿದ್ದಾರೆ.