ಆ್ಯಕ್ಸಲ್ ತುಂಡಾಗಿ ಸರ್ಕಾರಿ ಬಸ್‌ ಪಲ್ಟಿ! – ವಿದ್ಯಾರ್ಥಿ ಸಾವು.. 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ!

ಆ್ಯಕ್ಸಲ್ ತುಂಡಾಗಿ ಸರ್ಕಾರಿ ಬಸ್‌ ಪಲ್ಟಿ! – ವಿದ್ಯಾರ್ಥಿ ಸಾವು.. 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ!

ದಾವಣಗೆರೆಯಲ್ಲಿ ಭೀಕರ ಅವಘಡ ಸಂಭವಿಸಿದೆ. ಸರ್ಕಾರಿ ಬಸ್‌ನ ಆ್ಯಕ್ಸಲ್ ತುಂಡಾಗಿ  ಬಸ್‌ ಪಲ್ಟಿಯಾಗಿದೆ. ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 20ಕ್ಕೂ ಅಧಿಕ ಮಂದಿ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಕಲ್ಪತರು ನಾಡಿನಲ್ಲಿ ಮುಂದುವರೆದ ನವಿಲುಗಳ ಸರಣಿ ಸಾವು! – 1 ತಿಂಗಳಲ್ಲಿ 60 ನವಿಲುಗಳು ಹಕ್ಕಿ ಜ್ವರಕ್ಕೆ ಬಲಿ!

ಈ ಭೀಕರ ಅಪಘಾತ  ಘಟನೆ ಚನ್ನಗಿರಿ ತಾಲೂಕಿನ ಮರಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ದರ್ಶನ್ (21) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ಹಾಗೂ ಬಸವಾಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಬಸ್‌ ದಾವಣಗೆರೆಯಿಂದ ಬಸವಾಪಟ್ಟಣಕ್ಕೆ ಹೊರಟಿತ್ತು. ಈ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೆಳಗ್ಗೆ 10:30 ಗಂಟೆ ವೇಳೆಗೆ ಮರಬನಹಳ್ಳಿ ಸಮೀಪ ಬಸ್‌ ಚಲಿಸುತ್ತಿದ್ದಾಗ, ಬಸ್‌ನ ಆ್ಯಕ್ಸಲ್ ತುಂಡಾಗಿ ಗಾಲಿಗಳು ಬಸ್‌ನಿಂದ ಕಳಚಿಕೊಂಡು ಬಿದ್ದಿವೆ. ಪರಿಣಾಮವಾಗಿ ಬಸ್‌ ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನು ಬೆಳಗಿನ ಸಮಯವಾಗಿದ್ದರಿಂದ, ಹಳ್ಳಿಗಳಿಂದ ನಗರದ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳೇ ಈ ಬಸ್‌ನಲ್ಲಿ ಅಧಿಕ ಸಂಖ್ಯೆಯಲ್ಲಿದ್ದರು ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೇ ಆಸ್ಪತ್ರೆಯತ್ತ ಜಮಾಯಿಸಿದ ಗಾಯಾಳುಗಳ ಸಂಬಂಧಿಕರು, ತಮ್ಮವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಆದರೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ದರ್ಶನ್‌ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Shwetha M