ಕಲ್ಪತರು ನಾಡಿನಲ್ಲಿ ಮುಂದುವರೆದ ನವಿಲುಗಳ ಸರಣಿ ಸಾವು! – 1 ತಿಂಗಳಲ್ಲಿ 60 ನವಿಲುಗಳು ಹಕ್ಕಿ ಜ್ವರಕ್ಕೆ ಬಲಿ!

ಕಲ್ಪತರು ನಾಡಿನಲ್ಲಿ ಮುಂದುವರೆದ ನವಿಲುಗಳ ಸರಣಿ ಸಾವು! – 1 ತಿಂಗಳಲ್ಲಿ 60 ನವಿಲುಗಳು ಹಕ್ಕಿ ಜ್ವರಕ್ಕೆ ಬಲಿ!

ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಕಲ್ಪತರು ನಾಡಿನಲ್ಲಿ  H5N1 ಅಟ್ಟಹಾಸ ಮೆರೆದಿದ್ದು, ನವಿಲುಗಳ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಬಸ್‌ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ! – ಆಮೇಲೆ ಏನಾಯ್ತು?

ತುಮಕೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದಿಂದಾಗಿ 44 ನವಿಲುಗಳು ಮತ್ತು 30 ಕೋಳಿಗಳು ಸಾವನ್ನಪ್ಪಿದ್ದವು. ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಲ್ಯಾಬ್ ವರದಿ ದೃಢಪಡಿಸಿತ್ತು. ಇದೀಗ ಮತ್ತೆ ನವಿಲುಗಳ ಸಾವನ್ನಪ್ಪಿವೆ. ಕಳೆದ 1 ತಿಂಗಳಲ್ಲಿ 60 ನವಿಲುಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ನವಿಲುಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಕಳೆದ 30 ದಿನಗಳಲ್ಲಿ ಸಾವನ್ನಪ್ಪಿದ ನವಿಲುಗಳ ಸಂಖ್ಯೆ ಈಗ 60ರ ಗಡಿ ದಾಟಿದೆ. ಈ ಹಿಂದೆ 44 ನವಿಲುಗಳು ಸಾವನ್ನಪ್ಪಿದ್ದ ವರದಿಯಾಗಿತ್ತು, ಇದೀಗ ಆ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ತುಮಕೂರು ತಾಲೂಕು ಮಾತ್ರವಲ್ಲದೆ, ಇದೀಗ ಕುಣಿಗಲ್‌ನಲ್ಲಿಯೂ ನವಿಲಿನ ಕಳೆಬರ ಪತ್ತೆಯಾಗಿದ್ದು, ಹಕ್ಕಿ ಜ್ವರ ಜಿಲ್ಲೆಯ ಇತರೆ ಭಾಗಗಳಿಗೂ ವ್ಯಾಪಿಸುತ್ತಿರುವ ಮುನ್ಸೂಚನೆ ನೀಡಿದೆ. ಕುಣಿಗಲ್‌ನಲ್ಲಿ ಮತ್ತೆ ನವಿಲುಗಳು ಸಾವನ್ನಪ್ಪಿದರೆ ಕೂಡಲೇ ಸ್ಯಾಂಪಲ್‌ಗಳನ್ನು ವರದಿಗೆ ರವಾನಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇನ್ನು ನವಿಲುಗಳ ನಿರಂತರ ಸಾವಿನ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಹಕ್ಕಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಕಾಡುಪ್ರಾಣಿಗಳು ಹಾಗೂ ಹಕ್ಕಿಗಳ ಸಾವಿನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ವರದಿ ಮಾಡಲು ತಿಳಿಸಲಾಗಿದೆ.

Shwetha M